Type Here to Get Search Results !

Famous Proverb in kannada - Gadematugalu in kannada - ಗಾದೆಮಾತು

 Table of Content (toc)


kannada gadematu

ಹನಿಹನಿ ಕೂಡಿದರೆ ಹಳ್ಳ ತೆನೆ ತೆನೆ ಕೂಡಿದರೆ ಬಳ್ಳ 

 ನೀರಿನ ಒಂದೊಂದೇ ಹನಿ ಸೇರಿಕೊಂಡರೆ ಹಳ್ಳ ತುಂಬಿಕೊಳ್ಳುತ್ತದೆ. ಹನಿಯ ಗಾತ್ರ ಚಿಕ್ಕದಾದರೂ ಅನೇಕ ಹನಿಗಳು ಜೊತಗೂಡಿದಾಗ ಇಡೀ ಹಳ್ಳವೇ ತುಂಬಿಬಿಡುತ್ತದೆ. ಹಾಗೆಯ ಒಂದೊಂದೇ ತನೆ ಕೂಡಿಕೊಂಡಾಗ ಬಳ್ಳವು ತುಂಬಿಕೊಳ್ಳುತ್ತದೆ. ಬಳ್ಳವೆಂದರೆ ಧಾನ್ಯವನ್ನು ಅಳೆಯುವ ಸಾಧನ. ನೀರಿನ ಹನಿಯಿರಲಿ, ಧಾನ್ಯವಿರಲಿ ಅಥವಾ ಇನ್ನಾವುದೇ ವಸ್ತುವಿರಲಿ ಅವನ್ನು ಒಟ್ಟುಗೂಡಿಸುತ್ತಾ ಹೋದರೆ ಹೆಚ್ಚಾಗುತ್ತಾ ಹೋಗುತ್ತದೆ. ತಮ್ಮ ಬದುಕನ್ನು ಸುಗಮವಾಗಿಸುತ್ತದೆ. ಜೋಪಾನವಾಗಿ ಒಟ್ಟು ಗೂಡಿಸುವುದು ಮುಖ್ಯ. ಅಷ್ಟೆ, ಒಂದು ಹನಿ ನೀರನ್ನೂ ವ್ಯರ್ಥ ವಾದದ ಸಂಗ್ರಹಿಸುತ್ತಾ ಹೋದರೆ ನೀರಿನ ಕೊರತೆಯ ಬಾಧಿಸುವುದಿಲ್ಲ. ಒಂದೊಂದು ತೆನೆಯನ್ನೂ ವ್ಯರ್ಥ ಮಾಡದೆ ಒಟ್ಟು ಸೇರಿಸುತ್ತಾಹೋದರೆ ಬಳ್ಳವೇ ತುಂಬುವಂತಾಗುತ್ತದೆ. ನಮ್ಮ ಹೊಟ್ಟೆಗೆ ಹಸಿವು ಬಾಧಿಸುವುದಿಲ್ಲ. ''ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ ಎಂಬ ಗಾದೆಯು ಅದನ್ನೇ ಹೇಳುತ್ತದೆ.

Gademathu










ಗಾದೆಗೊಂದು ಕಥೆ :

ರವಿಗೆ ಸೈಕಲ್ ಎಂದರೆ ಬಹಳ ಇಷ್ಟ. ಸ್ಕೂಲ್ ಮುಗಿದ ತಕ್ಷಣ ಟ್ರಿಣ್ ಟ್ರಿಣ್ಎಂದು ಬೆಲ್ ಬಾರಿಸಬೇಕು, 'ಜುಂ' ಅಂತ ಬೀದಿಯಲ್ಲಿ ಸುತ್ತಾಡಬೇಕು ಎಂಬ ಆಸೆ.
ಅಮ್ಮಾ, ನಂಗೆ ಸೈಕಲ್ ಕೊಡಿಸು'' ಎಂದು ರವಿ ದಿನಾಲೂ ಅಮ್ಮನನ್ನು ಕೇಳುತ್ತಿದ್ದನು.
ಈವಾಗ್ಲೆ ಸೈಕಲ್ ಯಾಕಪ್ಪ ನಿಂಗೆ? ಸುಮ್ಮನೆ ಕೈಯೋ ಕಾಲೋ ಮುರ್ಕೊಲ್ತೀಯಾ  ಅಷ್ಟೆ'' ಎನ್ನುತ್ತಿದ್ದಳು ರವಿಯ ಅಮ್ಮ,

ಅಪ್ಪಾ, ಸೈಕಲ್ ಕೊಡಿಸಪ್ಪ...ಎಂದು ರವಿಯು ತನ್ನ ಅಪ್ಪನ ಬಳಿಯಲ್ಲಿಯೂ ಗೋಗರೆಯುತ್ತಿದ್ದನು.
ಮನೆಯ ಖರ್ಚು, ನಿನ್ನ ಮತ್ತು ನಿನ್ನ ತಂಗಿಯ ಓದಿನ ಖರ್ಚು ಜಾಸ್ತಿಯಾಗುತ್ತದೆ. ಇನ್ನು ಸೈಕಲ್‌ಗೆ ನಾನು ಎಲ್ಲಿಂದ ದುಡ್ಡು ತರಲಿ??”  ತಂದೆ ರೇಗುತ್ತಿದ್ದನು.

ರವಿಯ ಗೆಳೆಯರೆಲ್ಲರೂ ಸೈಕಲ್‌ನಲ್ಲಿಯೇ ಸ್ಕೂಲಿಗೆ ಹೋಗುತ್ತಿದ್ದರು. ಇದನ್ನು ಕಂಡು ಆತನಿಗೂ ಹಾಗೇ ಹೋಗಬೇಕಂಬ ಆಸೆಯಾಗುತ್ತಿತ್ತು. ಹೇಗಾದರೂ ಮಾಡಿ ಸೈಕಲ್ ಕೊಂಡುಕೊಳ್ಳಲೇ ಬೇಕೆಂದು ಅವನು ಯೋಚಿಸಿದನು.

ಅಂದಿನಿಂದ, ತನ್ನಿಂದ ಸಾಧ್ಯವಾದಷ್ಟು ಹಣವನ್ನು ಕೂಡಿಡತೊಡಗಿದನು. ಶಾಲೆಗೆ ಬಸ್ಸಿನಲ್ಲಿ ಹೋಗದ ನಡೆದ ಹೋಗತೊಡಗಿದನು. ಪ್ರತಿ ಶನಿವಾರ ಮತ್ತು ಭಾನುವಾರ ಅಪ್ಪ ಐಸ್‌ಕ್ರೀಂ ಮತ್ತು ಚಾಕೊಲೇಟ್ ಕೊಳ್ಳಲು ಹಣ ಕೊಡುತ್ತಿದ್ದರು. ರವಿಯು ಆ ಹಣವನ್ನು ಖರ್ಚು ಮಾಡದೆ ಉಳಿಸಿದನು. ಟ್ಯೂಷನ್‌ಗೆ ಹೋಗದೆ ಮನೆಯಲ್ಲಿಯೇ ತಾನೇ ಓದಿಕೊಳ್ಳಲು ತೊಡಗಿದನು. ಟ್ಯೂಷನ್‌ಗೆಂದು ಅಪ್ಪ ಕೊಡುತ್ತಿದ್ದ ಹಣವನ್ನು ಕೂಡಿಡತೊಡಗಿದನು.

ಅಜ್ಜಿಯು ಆಗಾಗ ರವಿಯನ್ನು ಸಾಮಾನು ತರಲು ಅಂಗಡಿಗೆ ಕಳುಹಿಸುತ್ತಿದ್ದಳು. ಸಾಮಾನು ತಂದು ಮಿಕ್ಕಿದ ಹಣವನ್ನು ನೀನೇ ಇಟ್ಟುಕೊ, ಮಿಠಾಯಿ ತಿನ್ನು'' ಎನ್ನುತಿದ್ದಳು. ಈ ಹಣವನ್ನು ರವಿ ಉಳಿತಾಯ ಮಾಡತೊಡಗಿದನು.

ಹೀಗೆಯೇ ಒಂದು ವರ್ಷ ಉರುಳಿತು. ರವಿಯು ಕೂಡಿಟ್ಟ ಹಣವು ಮೂರು ಸಾವಿರ ರೂಪಾಯಿ ದಾಟಿತ್ತು! ಹಣವನ್ನು ಎಣಿಸಿ ಅವನು 'ಸೈಕಲ್ ಕಾಕಾ'ನ ಅಂಗಡಿಗೆ ಓಡಿದನು.ಮೂರು ಸಾವಿರ ರೂಪಾಯಿಗಳಿಗೆ ನಿನಗೆ ಹೊಸ ಸೈಕಲ್ ಸಿಗಲಾರದು. ಬೇಕಾದರೆ ಹಳೆಯ ಸೈಕಲ್ ಕೊಂಡುಕೊಳ್ಳಬಹುದು  ಎಂದು ಸೈಕಲ್ ಕಾಕಾ ಹೇಳಿದನು.

 ರವಿಯು ಮನೆಗೆ ಮರಳಿದನು. ಅಪ್ಪಾ, ನಾನು ಮೂರು ಸಾವಿರ ನ್ರೂಪಾಯಿಗಳನ್ನು ಕೂಡಿಟ್ಟಿದ್ದೀನಿ. ಇದರಿಂದ ಹಳೆಯ ಸೈಕಲ್ ಸಿಗುವುದಂತೆ, ಕೊಂಡುಕೊಳ್ಳಲೇ?'' ಎಂದು ತನ್ನ ತಂದೆಯಲ್ಲಿ ಕೇಳಿದನು.

ಖಂಡಿತ ಕೊಂಡುಕೊ, ಬೇಕಾದರೆ ನಾನೂ ನಿನ್ನ ಜೊತೆ ಬರುವೆ. ನಿನಗೆ ಸಿಕ್ಕಿದ ಅಲ್ಪಸ್ವಲ್ಪ ಹಣವನ್ನು ಕೂಡಿಟ್ಟು ನಿನ್ನ ಆಸೆಯನ್ನು ಪೂರೈಸಿಕೊಂಡೆ. ಭೇಷ್ ರವಿ! ಹನಿ ಹನಿ ಕೂಡಿದರೆ ಹಳ್ಳ ತೆನೆತೆನೆ ಕೂಡಿದರೆ ಬಳ್ಳ ಅನ್ನೋದು ಇದಕ್ಕೇ. ಹಣವೇ ಆಗಲಿ, ಇತರ ವಸ್ತುವೇ ಆಗಲಿ ವ್ಯರ್ಥ ಮಾಡದೆ ಜಾಗ್ರತೆಯಿಂದ ಕೂಡಿಡಬೇಕು. ಇದರಿಂದ ನಮಗೇ ಒಳ್ಳೆಯದು'' ಎಂದನು ಅಪ್ಪ. ರವಿಯು ತಂದೆಯ ಜೊತೆಯಲ್ಲಿ ಕಾಕಾನ ಅಂಗಡಿಗೆ ಹೋಗಿ ಸೈಕಲ್ ಕೊಂಡುಕೊಂಡನು. ದಿನನಿತ್ಯ ಶಾಲೆಗೆ ಸೈಕಲ್‌ನಲ್ಲಿಯೇ ಹೋಗತೊಡಗಿದನು. ''ಹನಿ ಹನಿ ಕೂಡಿದರೆ ಹಳ್ಳ ತೆನೆ ತೆನೆ ಕೂಡಿದರೆ ಬಳ್ಳಎಂಬ ಗಾದೆಯ ತಿರುಳು ಅವನಿಗೆ ಈಗ ಚೆನ್ನಾಗಿ ಅರ್ಥವಾಗಿತ್ತು

 

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ

ಕುಂಬಾರನು ಕಷ್ಟಪಟ್ಟು ಮಣ್ಣಿನ ಮಡಕೆ-ಕುಡಿಕೆ ತಯಾರಿಸುತ್ತಾನೆ. ಅವನಿಗೆ ಅವುಗಳನ್ನು ತಯಾರು ಮಾಡಲು ಶ್ರಮ, ಸಮಯ ಎರಡೂ ಬೇಕಾಗುತ್ತದೆ. ಆದರೆ ಅಷ್ಟು ಸಮಯ ವ್ಯಯಿಸಿ, ಶ್ರಮಪಟ್ಟು ಸಿದ್ಧಪಡಿಸಿದ ಮಡಿಕೆಗೆ ಒಂದು ದೊಣ್ಣೆ ತಗುಲಿದರೂ ಸಾಕು, ಅದು ಒಡೆದುಹೋಗುತ್ತದೆ! ಕುಂಬಾರನ ಶ್ರಮ, ಸಮಯ ಎಲ್ಲವೂ ವ್ಯರ್ಥವಾಗುತ್ತದೆ. ಅವನಿಗಾಗುವ ನಷ್ಟ ಅಪಾರ. ಯಾವುದೇ ಕೆಲಸವಾದರೂ ಅಷ್ಟೆ ಅದು ಒಮ್ಮಿಂದೊಮ್ಮೆಗೇ ಪೂರ್ಣಗೊಳ್ಳುವುದಿಲ್ಲ ಆ ಕೆಲಸಕ್ಕೆ ಸಾಕಷ್ಟು ಶ್ರಮ, ಸಮಯ ಮೀಸಲಿಡಬೇಕಾಗುತ್ತದೆ. ಆದರೆ ಅದನ್ನು ಹಾಳುಗೆಡವಲು ಕೆಲವೇ ಕೆಲವು ನಿಮಿಷಗಳು ಸಾಕು! ಹಾಗೆಯೇ, ಒಳ್ಳೆಯ ಸಾಧನೆ ಮಾಡಲು, ಒಳ್ಳೆಯ ಹೆಸರು ಗಳಿಸಲು ತುಂಬಾ ಶ್ರಮ ಅಗತ್ಯ. ಆದರೆ ಸಾಧನೆಯನ್ನು ಮಣ್ಣುಪಾಲು ಮಾಡಲು, ಹೆಸರು ಕಡಿಸಿಕೊಳ್ಳಲು ನಿಮಿಷ ಸಾಕು. ''ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ'' ಎಂಬ ಗಾದೆಯ ಅರ್ಥ ಇದೇ.


 Gademathu

 ಗಾದೆಗೊಂದು ಕಥೆ :

"ಚೆಲುವಪ್ಪ, ನನಗೆ ಎರಡು ಮಣ್ಣಿನ ಗೊಂಬೆಗಳನ್ನು ಕೊಡುವೆಯಾ? ಒಂದು ನನಗೆ, ಇನ್ನೊಂದು ನನ್ನ ತಮ್ಮಂಗೆ....'' ಎಂದು ಪುಟ್ಟಿಯು ಚೆಲುವಪ್ಪನಲ್ಲಿ ಕೇಳಿದಳು.
 "ತಗೋ ಪುಟ್ಟಿ. ಕೇವಲ ಹತ್ತೇ ರೂಪಾಯಿ...."ಎಂದು ಚೆಲುವಪ್ಪನು ಎರಡು ಪುಟ್ಟ ಮಣ್ಣಿನ ಗೊಂಬೆಗಳನ್ನು ಪುಟ್ಟಿಗೆ ಕೊಟ್ಟನು. ಪುಟ್ಟಿಯು ಗೊಂಬೆಗಳನ್ನು ಮುದ್ದಿಸುತ್ತಾ ಅವುಗಳ ಬಳಿ ಮಾತಾಡುತ್ತಾ ಅಲ್ಲಿಂದ ಹೊರಟಳು.
 ಚೆಲುವಪ್ಪ ಮಣ್ಣಿನ ಗೊಂಬೆಗಳನ್ನು ತಯಾರಿಸುತ್ತಿದನು. ಅಂದ ಚೆಂದದ ಆನೆಗಳು, ಪ್ರಾಣಿಪಕ್ಷಿಗಳು, ದೇವ ದೇವತೆಯರ ಗೊಂಬೆಗಳು ಅವನ ಬಳಿ ಇದ್ದವು. ಅವನು ಪ್ರತಿದಿನ ಸಂಜೆ ದೇವಾಲಯದ ಮುಂದಿನ ಆಲದ ಮರದ ಕೆಳಗೆ ಕುಳಿತುಕೊಳ್ಳುತ್ತಿದ್ದನು. ತಾನು ಮನೆಯಿಂದ ತಂದಿದ್ದ ಬಗೆಬಗೆಯ ಗೊಂಬೆಗಳನ್ನು ಅಂದವಾಗಿ ಜೋಡಿಸಿ ಇಡುತ್ತಿದ್ದನು.
ಮಕ್ಕಳಿಗೆಲ್ಲ ಚೆಲುವಪ್ಪನ ಗೊಂಬೆಗಳೆಂದರೆ ಬಹಳ ಇಷ್ಟ. ಅವನ ಬಳಿ ಇರುವ ಕುದುರೆ, ಜಿಂಕೆ, ಆನೆ ಮೊದಲಾದ ಪ್ರಾಣಿಗಳ ಬಣ್ಣಬಣ್ಣದ ಗೊಂಬೆಗಳನ್ನು ಮಕ್ಕಳು ಮುಟ್ಟಿ ತಡವಿ ನೋಡುತ್ತಿದ್ದರು; ಸಂತೋಷಪಡುತ್ತಿದ್ದರು. ಕೆಲ ಮಕ್ಕಳು, ಹೆಂಗಳೆಯರು ಗೊಂಬೆಗಳನ್ನು ಕೊಳ್ಳುತ್ತಿದ್ದರು. 'ಹುಷಾರಾಗಿರಿ ಮಕ್ಕಳೇ. ಬಿದ್ದು ಹೋದ್ರೆ ಮುರಿದುಹೋಗ್ತವೆ'' ಎಂದು ಚಲುವಪ್ಪನು ಹೇಳುತ್ತಿದ್ದನು.
ಆ ಆಲದಮರದಲ್ಲಿ ಒಂದು ಕೋತಿಯು ವಾಸಿಸುತ್ತಿತ್ತು. ಅದು ದಿನಾ ಚೆಲುವಪ್ಪನನ್ನು ನೋಡಿ ಹಲ್ಲುಕಿರಿಯುತ್ತಿತ್ತು.
ಒಂದು ದಿನ ಚೆಲುವಪ್ಪ ಬಾಳೆಹಣ್ಣನ್ನು ತಿನ್ನುತ್ತಿದ. ಕೋತಿಯು ಅವನ ಬಳಿಗೆ ಬಂದು ಮಿಕಮಿಕನೆ ನೋಡಿತು. 'ಪಾಪ, ಕೋತಿಗೂ ಹಸಿವಾಗುತ್ತಿರಬೇಕು' ಎಂದುಕೊಂಡ ಚೆಲುವಪ್ಪನು ಅದಕ್ಕೂ ಒಂದು ಬಾಳೆಹಣ್ಣನ್ನು ಕೊಟ್ಟನು. ಕೋತಿಯು ಸಂತೋಷದಿಂದ ಬಾಳೆಹಣ್ಣನ್ನು ತಿಂದಿತು. ಛಂಗನೆ ನೆಗೆದು ಮರವನ್ನೇರಿತು.
 
ಚೆಲುವಪ್ಪನು ಪ್ರತಿದಿನ ಕೊತಿಗೆ ಬಾಳೆಹಣ್ಣು ಕೊಡತೊಡಗಿದನು. ಕೋತಿಯು ಪ್ರತಿದಿನವೂ ಚೆಲುವಪ್ಪನಿಗಾಗಿ ಕಾಯತೊಡಗಿತು.
 ಅಂದು ಹಬ್ಬದ ದಿನ. ದೇವಸ್ಥಾನದಲ್ಲಿ ಜನವೋ ಜನ. ತನ್ನ ವ್ಯಾಪಾರವೂ ಚೆನ್ನಾಗಿ ಆಗಬಹುದೆಂದು ಚೆಲುವಪ್ಪ ಯೋಚಿಸಿದ. ಹಬ್ಬದ ದಿನಕ್ಕೆಂದು ಆತ ಹಲವಾರು ಗೊಂಬೆಗಳನ್ನು ತಯಾರಿಸಿದ್ದ. ದೂರದ ಊರಿನಿಂದ ವಿಶೇಷ ಮಣ್ಣು ತಂದು ಹಲವಾರು ತಿಂಗಳುಗಳ ಕಾಲ ಕಷ್ಟಪಟ್ಟು ನಾನಾ ಬಗೆಯ ಗೊಂಬೆಗಳನ್ನು ತಯಾರಿಸಿದ್ದ. ಅವು ಆಕರ್ಷಕವಾಗಿ ಕಾಣಲು ಬಣ್ಣವನ್ನೂ ಹಚ್ಚಿದ್ದ.
ಹಬ್ಬದ ದಿನ ಚೆಲುವಪ್ಪ ಗೊಂಬೆಗಳನ್ನೆಲ್ಲ ಅಂದವಾಗಿ ಜೋಡಿಸತೊಡಗಿದ. ನೂರಾರು ಗೊಂಬೆಗಳನ್ನು ನೋಡುತ್ತಿದ್ದಂತ ಚೆಲುವಪ್ಪನಿಗೇ ಆನಂದವೆನಿಸಿತು. ಮಕ್ಕಳಂತೂ ಈ ಗೊಂಬೆಗಳನ್ನು ಕಂಡು ಖುಷಿಪಡುವುದು ಖಂಡಿತ ಎಂದುಕೊಂಡ. ಇಂದು ಹಬ್ಬದ ದಿನವಲ್ಲವೇ? ದೇವರಿಗೆ ಕೈ ಮುಗಿದು ಬರೋಣ'' ಎಂದುಕೊಂಡ.
ಆ ದಿನ ಚಲುವಪ್ಪನ ಜೊತೆಗೆ ಅವನ ಪುಟ್ಟ ಮಗ ರಂಗನ ಬಂದಿದ. "ನೋಡು ರಂಗಾ, ನೀನಿಲ್ಲೇ ಕೂತಿರು, ನಾನು ದೇವರಿಗೆ ಕೈಮುಗಿದು ಬತ್ತೀನಿ. ಜೋಪಾನ" ಎಂದು ಹೇಳಿದ ಚಲುವಪ್ಪ ದೇವಾಲಯದ ಒಳಗೆ ಹೋದನು.
ಆಲದ ಮರದಲ್ಲಿ ಕುಳಿತಿದ್ದ ಕೋತಿ ಚೆಲುವಪ್ಪನನ್ನು ನೋಡುತ್ತಲೇ ಇತ್ತು . ಆ ದಿನ ಚೆಲುವಪ್ಪನಿಗೆ ಬಾಳೆಹಣ್ಣು ತರಲು ಮರೆತು ಹೋಗಿತ್ತು ಅಷ್ಟೇ ಏಕೆ, ಅಂದು ಅವನಿಗೆ ಕೂತಿಯ ನೆನಪೆ ಆಗಿರಲಿಲ್ಲ . ಬಾಳೆಹಣ್ಣು ಸಿಕ್ಕಿಲ್ಲವೆಂದು ಕೋತಿಗೆ ಸಿಟ್ಟು ಓಡಿ ಬಂದು ಚೆಲುವಪ್ಪನ ಗೊಂಬೆಗಳನ್ನೆಲ್ಲ ಎಸೆದು ಪುಡಿ ಮಾಡಿತು.  ತಡೆಯಲು  ಬಂದ ರಂಗನನ್ನು "ಗ ..ರ್ " ಎಂದು ಹೆದರಿಸಿತು.ರಂಗ ಹೆದರಿ ದೋರ ಸರಿದ.
ಚೆಲುವಪ್ಪ ದೇವಸ್ಥಾನದಿಂದ ಮರಳಿದಾಗ ಗೊಂಬೆಗಳೆಲ್ಲ ಪುಡಿ - ಪುಡಿ ಆಗಿದ್ದವು. ನಾನು ಎಷ್ಟು ಕಷ್ಟಪಟ್ಟು ಈ ಗೊಂಬೆಗಳನ್ನು ತಯಾರಿಸಿದೆ . ಎಲ್ಲವು ಒಂದೇ ನಿಮಿಷದಲ್ಲಿ ಹಾಳಾಗಿ ಹೋಯ್ತಲ್ಲ. ಈ ಕುಚೇಷ್ಟೆ ಬುದ್ಧಿಯ ಕೋತಿಯ ಗೆಳತನ ಮಾಡಿದ್ದು ನನ್ನ ತಪ್ಪು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ಆಯಿತು'' ಎಂದು ದುಃಖ ಪಡುತ್ತ  ಮನೆಗೆ ಮರಳಿದನು.

  ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧುವಿಲ್ಲ

ಯಾವುದೇ ಅಡುಗೆಯನ್ನು ಮಾಡಿದರೂಯಾವುದೇ ತಿಂಡಿಯನ್ನು  ಮಾಡಿದರೂ ಉಪ್ಪು ಹಾಕದಿದ್ದರೆ ಅದಕ್ಕೆ ರುಚಿ ಇಲ್ಲ . ಅದನ್ನು ತಿನ್ನಲು ಹಿತವೆನಿಸುವುದಿಲ್ಲ. ಹಾಗೆಯೇ, ಎಷ್ಟೇ ಬಂಧುಗಳಿದ್ದರೂ ತಾಯಿಗಿಂತ ಹತ್ತಿರವಾದ ಬಂಧುಗಳು ಯಾರ ಇಲ್ಲ ಇತರರೆಲ್ಲರಿಗಿಂತಲು ತಾಯಿಯು  ಮಕ್ಕಳ ಕಷ್ಟ-ಸುಖಗಳನ್ನು ಹೆಚ್ಚು ತಿಳಿದಿರುತ್ತಾಳೆ. ತನ್ನ ಮಕ್ಕಳನ್ನು ಬಹುವಾಗಿ ಪ್ರೀತಿಸುತ್ತಾಳೆ. ಮಕ್ಕಳು ತಪ್ಪು ಮಾಡಿದರೂ ಕ್ಷಮಿಸುತ್ತಾಳೆ. ತನ್ನ ಮಕ್ಕಳು ಸದಾ ಸಂತೋಷದಿಂದ ಇರಲಿ ಎಂದು ಬಯಸುತ್ತಾಳೆ. ಅದಕ್ಕೇ, ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧುವಿಲ್ಲ ಎಂಬ ಗಾದೆ ಹುಟ್ಟಿಕೊಂಡಿರುವುದು.

Gademathu

  ಗಾದೆಗೊಂದು ಕಥೆ :

ಒಂದು ಪಟ್ಟಣದಲ್ಲಿ ಮಾಣಿಕ್ಯ ಎನ್ನುವ ಬಾಲಕನಿದ್ದನು. ಅವನಿಗೆ ತಂದೆ ಇರಲಿಲ್ಲ. ಆತ ಮಗುವಾಗಿದ್ದಾಗಲೇ ತಂದೆಯು ತೀರಿಕೊಂಡಿದ್ದನು. ತಾಯಿ ಸೀತಮ್ಮ ಮಗನ ಲಾಲನೆ ಪಾಲನೆ ಹೊಣೆ ಹೊತ್ತುಕೊಂಡಿದ್ದಳು. ಯಾರದೋ ಮನೆಯಲ್ಲಿ ಕೂಲಿ ಕೆಲಸ ಮಾಡಿ ಮಾಣಿಕ್ಯನನ್ನು ಓದಿಸುತ್ತಿದ್ದಳು. ತಾನು ಊಟ ಮಾಡದಿದ್ದರೂ ಸರಿ ಮಗ ಚೆನ್ನಾಗಿರಬೇಕೆಂದು ಹಗಲೂ ಇರುಳೂ ದುಡಿಯುತ್ತಿದ್ದಳು. 'ಮಗೂ ಮಾಣಿಕ್ಯ, ನೀನು ತುಂಬಾ ಓದಬೇಕು. ಓದಿ ದೊಡ್ಡ ವ್ಯಕ್ತಿಯಾಗಬೇಕು' ಎಂದು ಸೀತಮ್ಮ ಯಾವಾಗಲೂ ಹೇಳುತ್ತಿದ್ದಳು.
 
ಅಂತೆಯೇ, ಮಾಣಿಕ್ಯನು ಚೆನ್ನಾಗಿ ಓದಿದನು. ಕಾಲೇಜಿಗೆ ಸೇರಿಕೊಂಡನು. ತನ್ನ ಅಮ್ಮ ಕೂಲಿ ಕೆಲಸದಾಕೆ ಎಂದು ಹೇಳಲು ಅವನಿಗೆ ತುಂಬಾ ನಾಚಿಕೆ ಎನಿಸುತ್ತಿತ್ತು,
 
"ಅಮ್ಮಾ ನೀನು ಕಾಲೇಜಿನ ಹತ್ತಿರ ಬರಬೇಡ. ನನಗೆ ನಾಚಿಕೆ ಆಗುತ್ತೆ, ನನ್ನ ಗೆಳೆಯರೆಲ್ಲ ನಿನ್ನನ್ನು ನೋಡಿ ನಗುತ್ತಾರೆ' ಎಂದು ಒಂದು ದಿನ ಮಾಣಿಕ್ಯನು ಸೀತಮ್ಮನ ಬಳಿ ಹೇಳಿದನು. ಇದನ್ನು ಕೇಳಿ ಸೀತಮ್ಮನಿಗೆ ಬಹಳ ದುಃಖವಾಯಿತು.
 
ಹೀಗೇ ದಿನಾಲೂ ಮಾಣಿಕ್ಯನು ಸೀತಮ್ಮನನ್ನು ಏನಾದರೊಂದು ವಿಷಯಕ್ಕೆ ಬಯ್ಯತೊಡಗಿದನು. ಮಗ ಏಕೆ ಹೀಗಾದ ಎಂದು ಸೀತಮ್ಮ ಬೇಸರ ಪಟ್ಟುಕೊಂಡಳು.
 
ಕೆಲವು ದಿನಗಳ ಬಳಿಕ, ಹಳ್ಳಿಯಿಂದ ಸೀತಮ್ಮನ ತಂದೆ ಬಸಜ್ಜ ಬಂದನು. ನನ್ನ ಮಗನಿಗೆ ನನ್ನನ್ನು ಕಂಡರೆ ನಾಚಿಕೆ ಎನಿಸುತ್ತಿದೆ. ಏನು ಮಾಡಲಿ? ಕೂಲಿ ಕೆಲಸ ಬಿಟ್ರೆ ನಾವು ಊಟಕ್ಕೇನು ಮಾಡೋದು? ಅವನ ಕಾಲೇಜಿನ ಖರ್ಚು ಹೇಗೆ ಹೊಂದಿಸಿಕೊಳ್ಳೋದು?'' ಎಂದು ಸೀತಮ್ಮ ತನ್ನ ತಂದೆಯ ಬಳಿ ಕೇಳಿದಳು. ಮಗನ ವರ್ತನೆಯನ್ನು ನೆನೆದು ದುಃಖಪಟ್ಟುಕೊಂಡಳು.
 
''ಸ್ವಲ್ಪ ದಿವಸ ನಾನು ಅವನೊಂದಿಗೆ ಇಲ್ಲಿದ್ದೀನಿ. ನೀನು ಹಳ್ಳಿಗೆ ಹೊರಟುಹೋಗು'' ಎಂದು ಬಸಜ್ಜ ಹೇಳಿದನು. ಸೀತಮ್ಮ 'ಬೇಡ, ಬೇಡ'' ಎಂದು ಹೇಳಿದರೂ ಬಲವಂತದಿಂದ ಅವಳನ್ನು ಹಳ್ಳಿಗೆ ಕಳುಹಿಸಿಕೊಟ್ಟನು.
 
ಮನೆಯಲ್ಲಿ ಅಮ್ಮ ಇಲ್ಲವೆಂದು ತಿಳಿದಾಗ ಮಾಣಿಕ್ಯನಿಗೆ ಬೇಸರವೇನೂ ಆಗಲಿಲ್ಲ. ಹಾಗೆ ಮಾಡಬೇಡ, ಹೀಗೆ ಮಾಡಬೇಡ, ಕೆಟ್ಟ ಕೆಲಸ ಮಾಡಬೇಡ. ಅಲ್ಲಿ ಇಲ್ಲಿ ಅಲೆದಾಡ ಬೇಡ ಎಂದು ಬುದ್ದಿ ಹೇಳುವ ಈ ಅಮ್ಮ ಹಳ್ಳಿಗೆ ಹೋದುದು ಒಳ್ಳೆಯದೇ ಆಯಿತು' ಎಂದು ಆತ ಯೋಚಿಸಿದನು.
 
ಬಸಜ್ಜ ಬೆಳಗ್ಗೆ ರೊಟ್ಟಿಯನ್ನು ತಟ್ಟುತ್ತಿದ್ದನು. ಅದನ್ನು ತಿಂದು ಮಾಣಿಕ್ಯನು ಕಾಲೇಜಿಗೆ ಹೋಗುತ್ತಿದ್ದನು. ಬೀದಿ ಬದಿಯಲ್ಲಿ ಮಾರಾಟಕ್ಕೆ ಇಟ್ಟಿದ್ದ ಧೂಳು, ಕ್ರಿಮಿಕೀಟ ತುಂಬಿದ ತಿಂಡಿ ತಿನಿಸುಗಳನ್ನು ತಿನ್ನುತ್ತಿದ್ದನು. ಕಾಲೇಜು ಬಿಟ್ಟ ಮೇಲೆ ಅಲ್ಲಿ-ಇಲ್ಲಿ ಅಲೆದಾಡಿ ರಾತ್ರಿಯ ಹೊತ್ತಲ್ಲಿ ಮನೆಗೆ ಬರುತ್ತಿದ್ದನು.
 
ಬಸಜ್ಜನಿಗೆ ಸರಿಯಾಗಿ ಅಡುಗೆ ಮಾಡಲು ಬರುತ್ತಿರಲಿಲ್ಲ. ಸಾರಿಗೆ ಉಪ್ಪನ್ನೇ ಹಾಕುತ್ತಿರಲಿಲ್ಲ.
 
:ಥೂ.... ಹೋಗಜ್ಜಾ...ನೀನು ಸಾರಿಗೆ ಉಪ್ಪೇ ಹಾಕಿಲ್ಲ,ಉಪ್ಪಿಲ್ಲದಿದ್ದರೆ ಊಟಕ್ಕೆ ರುಚಿಯೇ ಇರಲ್ಲ' ಎಂದು ಮಾಣಿಕ್ಯನು ರೇಗುತ್ತಿದ್ದನು.
 
ಅದಕ್ಕೇ ಅನ್ನುವುದು ಉಪ್ಪಿಗಿಂತ ರುಚಿ ಇಲ್ಲ; ತಾಯಿಗಿಂತ ಬಂಧುವಿಲ್ಲ"  ಎನ್ನುತ್ತಾ ಬಸಜ್ಜನು ನಗುತ್ತಿದ್ದನು.
 
ಆದರೆ, ಮಾಣಿಕ್ಯನಿಗೋ ಅಜ್ಜನ ಮಾತು ಅರ್ಥವಾಗುತ್ತಿರಲಿಲ್ಲ, ಸಿಕ್ಕಿ ಸಿಕ್ಕಿದಲ್ಲಿ ಏನೇನೋ ತಿಂದು ಬರುತ್ತಿದ್ದನು. ಪರಿಣಾಮವಾಗಿ ಒಂದು ದಿನ ಕಾಯಿಲೆ ಬಿದ್ದನು. ಬಸಜ್ಜನು ಔಷಧಿಯನ್ನು ಕೊಡಿಸಿದನು; ಗಂಜಿ ತಯಾರಿಸಿ ಕೊಟ್ಟನು.
 
ಆದರೆ, ಮಾಣಿಕ್ಯನಿಗೆ ತನ್ನ ಅಮ್ಮನ ನೆನಪಾಗತೊಡಗಿತು. ತಾನು ಕಾಯಿಲೆ ಬಿದ್ದಾಗ ಅಮ್ಮತೋರಿಸುವ ಪ್ರೀತಿ, ಕಾಳಜಿ ಎಲ್ಲವೂ ನೆನಪಿಗೆ ಬರತೊಡಗಿತು. ಛೇ! ಅಮ್ಮನನ್ನು ತಾನಷ್ಟು ಬಯ್ಯುತ್ತಿದ್ದೆ. ಆದರೂ ಅಮ್ಮ ತನಗೆ ಏನೂ ಹೇಳುತ್ತಿರಲಿಲ್ಲ, ಬದಲಾಗಿ ಪ್ರೀತಿಯನ್ನೇ ತೋರಿಸುತ್ತಿದಳು. 'ಅಜ್ಞಾ ನನಗೀಗ ಅಮ್ಮ ಬೇಕು. ಆಮ್ಮಾ ಅಮ್ಮಾ...' ಎಂದು ಮಾಣಿಕ್ಯನು ನರಳಿದನು.
 
ಬಸಜ್ಜನು ಹಳ್ಳಿಯಿಂದ ಸೀತಮ್ಮನನ್ನು ಕರೆಸಿದನು. ಸೀತಮ್ಮ ಗಾಬರಿಯಿಂದ ಓಡಿ ಬಂದಳು. ಮಗ ಕಾಯಿಲೆ ಬಿದ್ದುದನ್ನು ಕಂಡಳು. ಪ್ರೀತಿಯಿಂದ ಅವನ ಆರೈಕೆ ಮಾಡಿದಳು. ಮಾಣಿಕ್ಯ ಬೇಗನೆ ಗುಣಮುಖನಾದನು. ಕಾಲೇಜಿಗೂ ಹೋಗಲಾರಂಭಿಸಿದನು.
 
''ಆಜ್ಜಾ, ನೀನು ಹೇಳಿದ್ದು ಸರಿ. ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ ಎಂಬುದು ನನಗೆ ಈಗ ಅರ್ಥವಾಯಿತು. ಇನ್ನು ಮುಂದೆ ನಾನು ಅಮ್ಮನನ್ನು ಬೈಯಲಾರೆ. ಅಮ್ಮ ನೆಂದರ ನಾಚಿಕೆ ಪಟ್ಟುಕೊಳ್ಳಲಾರೆ'' ಎಂದು ಮಾಣಿಕ್ಯನು ಹೇಳಿದನು.
 ಬಸಜ್ಜ ಮತ್ತು ಸೀತಮ್ಮ ಮುಗುಳುನಕ್ಕರು.

ರೋಗಿ ಬಯಸಿದ್ದೂ ಹಾಲು ವೈದ್ಯ ಹೇಳಿದ್ದೂ ಹಾಲು

ರೋಗಿಯಾದವನು ಇಂಥದೇ ಆಹಾರವನ್ನು ತಿನ್ನಬೇಕು, ಇಂಥ ಆಹಾರವನ್ನು ತಿನ್ನಬಾರದು ಎಂದು ವೈದ್ಯರು ಸೂಚಿಸಿರುತ್ತಾರೆ. ಒಂದು ವೇಳೆ, ರೋಗಿ ಬಯಸಿದ ಆಹಾರವನ್ನೇ ವೈದ್ಯರು ಸೂಚಿಸಿದರೆ ಎಷ್ಟು ಚೆನ್ನ! ರೋಗಿಗೆ ಹಾಲು ಅನ್ನವನ್ನು ತಿನ್ನಬೇಕೆಂಬ ಬಯಕೆ ಇರುತ್ತದೆ ಎಂದಿಟ್ಟುಕೊಳ್ಳಿ. ವೈದ್ಯರು ಅದನ್ನೇ ತಿನ್ನಲು ಹೇಳಿದರೆ ರೋಗಿಗೆ ಎಷ್ಟೊಂದು ಸಂತೋಷ ಆಗಬಹುದು! ಜೀವನದಲ್ಲಿ ನಾವು ಯಾವುದೋ ನಿರೀಕ್ಷೆಯನ್ನು ಇಟ್ಟು ಕೊಂಡಿರುತ್ತೇವೆ. 'ನಿರೀಕ್ಷೆಯಂತೆಯೇ ಆಗಲಪ್ಪಾ ದೇವರೆ' ಎಂದುಕೊಳ್ಳುತ್ತೇವೆ. ನಮ್ಮ ಆಸೆ ಈಡೇರಲಿ ಎಂಬ ಬಯಕೆ ನಮ್ಮಲ್ಲಿರುತ್ತದೆ. ನಿರೀಕ್ಷೆಯಂತೆಯೇ ನಮ್ಮ ಆಸೆ ಕೈಗೂಡಿದರೆ? 'ರೋಗಿ ಬಯಸಿದ್ದೂ ಹಾಲು ವೈದ್ಯ ಹೇಳಿದ್ದೂ ಹಾಲು' ಎಂಬ ಗಾದೆಯು ಇದನ್ನೇ ಹೇಳುತ್ತದೆ.

Gademathu

 

  ಗಾದೆಗೊಂದು ಕಥೆ :

ಪುಟ್ಟನ ಪರೀಕ್ಷೆಯು ಕಳೆದಿತ್ತು, ಅದೀಗ ತಾನೇ ರಜೆಯು ಆರಂಭವಾಗಿತ್ತು, ಪುಟ್ಟನ ತಂದೆ-ತಾಯಿ ಇಬ್ಬರೂ ನೌಕರಿಗೆ ಹೋಗುವವರು. ಬೆಳಗ್ಗೆ ಕೆಲಸಕ್ಕೆಂದು ಹೋದರೆ ಮತ್ತೆ ಮನೆಗೆ ಮರಳುವುದು ಸಂಜೆಯೇ. ಹಾಗಾಗಿ ರಜೆಯಲ್ಲಿ ಪುಟ್ಟನೊಬ್ಬನೇ ಮನೆಯಲ್ಲಿ ಇರಬೇಕಾಗುತ್ತಿತ್ತು,
 
ಊಟ, ತಿಂಡಿ, ಹಾಲು, ಹಣ್ಣು ಎಲ್ಲಾ ರೆಡಿ ಮಾಡಿ ಇಟ್ಟಿದ್ದೀನಿ ಪುಟ್ಟಾ, ಸರಿಯಾದ ವೇಳೆಗೆ ತಿಂಡಿ ತಿನ್ನು, ಊಟ ಮಾಡು.ಬೇಜಾರಾದಾಗ ಟಿ.ವಿ. ನೋಡು. ಹೊರಗೆ ಎಲ್ಲೂ ಹೋಗಬೇಡ'' ಎಂದು ಹೇಳಿ ಪುಟ್ಟನ ಅಪ್ಪ-ಅಮ್ಮ ಆಫೀಸಿಗೆ ಹೋಗುತ್ತಿದ್ದರು.
 
ಪುಟ್ಟನಿಗೆ ಒಬ್ಬನೇ ಮನೆಯಲ್ಲಿ ಕುಳಿತು ಕುಳಿತು ಬೇಸರವಾಗುತ್ತಿತ್ತು. ''ಅಪ್ಪಾ, ನಾನು ಊರಿಗೆ ಹೋಗ್ತಿನಿ'' ಎಂದು ಒಂದು ದಿನ ಅಪ್ಪನಲ್ಲಿ ಹೇಳಿದ್ದ. ಊರಿನಲ್ಲಿ ಅಜ್ಜಿ ತಾತನ ಒಡನಾಟ ಅವನಿಗೆ ಬಹಳ ಇಷ್ಟವಾಗುತ್ತಿತ್ತು, ಅಲ್ಲಿನ ಗುಡ್ಡಬೆಟ್ಟ, ಹೊಲ, ತೋಟ ಎಲ್ಲವೂ ಬಹಳ ಇಷ್ಟವಾಗುತ್ತಿದ್ದವು.
 
ನನಗೆ ರಜೆ ಇಲ್ಲವಲ್ಲೂ ಪುಟ್ಟಾ; ನೀನಿನ್ನೂ ಚಿಕ್ಕವನು. ಒಬ್ಬನೇ ಹೋಗಲು ಸಾಧ್ಯವಿಲ್ಲ, ಅಲ್ಲವಾ?'' ಎಂದಿದ್ದರು ಅಪ್ಪ. ಪುಟ್ಟ ಸುಮ್ಮನಾಗಿದ್ದ.
 
ಮರುದಿನ, ಅದೃಷ್ಟವಶಾತ್ ಊರಿನಿಂದ ತಾತನೇ ಬಂದುಬಿಟ್ಟರು. 'ಓಹೋ, ಪುಟ್ಟನಿಗೆ ರಜಾ ಶುರುವಾಗಿದೆಯಾ? ಹಾಗಿದ್ರೆ ಅವನು ನನ್ನೊಂದಿಗೆ ಬರಲಿ. ರಜಾ ಮುಗಿಯುವವರೆಗೆ ಊರಲ್ಲಿರಲಿ. ಆಮೇಲೆ ನಾನೇ ಅವನನ್ನು ವಾಪಸ್ ಕರೆದುಕೊಂಡು ಬರ್ತೀನಿ '' ಎಂದರು ತಾತ.
 
"ರೋಗಿ ಬಯಸಿದ್ದೂ ಹಾಲು, ವೈದ್ಯ ಹೇಳಿದ್ದೂ ಹಾಲು ಎಂಬಂತಾಯು, ಪುಟ್ಟ ಊರಿಗೆ ಹೋಗಬೇಕು ಎಂದು ಬಹಳ ಆಸೆಪಡ್ತಿದ್ದ ಈಗ ಅದು ಕೈಗೂಡಿತು'' ಎಂದರು ಪುಟ್ಟನ ಅಪ್ಪ.
 
ಪುಟ್ಟ ಸಂತೋಷದಿಂದ ಕುಣಿಯುತ್ತಾ ಊರಿಗೆ ಹೋಗುವ ತಯಾರಿ ನಡೆಸತೊಡಗಿದ.

ಅತಿಯಾಸೆ ಗತಿಗೇಡು

 ಎಂದಿಗೂ ಅತಿಯಾದ ಆಸೆ ಪಡಬಾರದು. ಅತಿಯಾಸೆ ಅಂದರೆ ದುರಾಸೆ. ದುರಾಸೆ ಪಡುವುದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲಬದಲಾಗಿ ಕೆಡುಕೇ ಆಗುತ್ತದೆ. ಅದಕ್ಕೇ ನಮ್ಮ ಹಿರಿಯರು ಅತಿಯಾಸೆ ಒಳ್ಳೆಯದಲ್ಲ ಅದು ಕೆಟ್ಟದ್ದನ್ನೇ ಉಂಟುಮಾಡುತ್ತದೆ; "ಅತಿಯಾಸೆ ಗತಿಗೇಡು" ಎಂದಿದ್ದು.

Gademathu

  ಗಾದೆಗೊಂದು ಕಥೆ :

ಒಂದು ಊರಿನಲ್ಲಿ ಗಂಗವ್ವ ಎನ್ನುವ ವೃದ್ಧೆಯು ವಾಸಿಸುತ್ತಿದ್ದಳು. ಅವಳಿಗೆ ಬಸವ ಎಂಬ ಒಬ್ಬ ಮೊಮ್ಮಗನಿದ್ದ. ಅಜ್ಜಿಯ ಬಳಿಯಲ್ಲಿ ಒಂದು ಎಮ್ಮೆ ಇತ್ತು. ಆಕೆ ಎಮ್ಮೆಯ ಹಾಲಿನಿಂದ ಮೊಸರು ಮತ್ತು ಬೆಣ್ಣೆಯನ್ನು ತಯಾರಿಸುತ್ತಿದ್ದಳು. ಮನೆ-ಮನೆಗೆ ಹೋಗಿ ಅದನ್ನು ಮಾರಿಬರುತ್ತಿದ್ದಳು.
 
ಅಜ್ಜಿಯು ಪ್ರತಿದಿನ ಬೆಳಗ್ಗೆ ಬಸವನಿಗೆ ತಿನ್ನಲು ರೊಟ್ಟಿ ಮತ್ತು ಬೆಣ್ಣೆಯನ್ನು ಕೊಡುತ್ತಿದ್ದಳು. ಬಸವನಿಗೆ ಇನ್ನೂ ಹೆಚ್ಚು ಬೆಣ್ಣೆಯನ್ನು ತಿನ್ನಬೇಕೆಂದು ಆಸೆಯಾಗುತ್ತಿತ್ತು ಅಜ್ಜಿಯು ಮಡಕೆಯಲ್ಲಿ ಬೆಣ್ಣೆಯನ್ನು ಹಾಕಿ ಕೊಂಡೊಯ್ಯುವಾಗ ಅದನ್ನು ಕದ್ದು ತಿನ್ನಬೇಕೆಂದು ಅವನು ಯೋಚಿಸುತ್ತಿದ್ದನು.
 
ಒಂದು ದಿನ ಅಜ್ಜಿಯು ಬಟ್ಟೆ ತೊಳೆಯಲು ನದಿಯತ್ತ ಹೋಗಿದ್ದಾಗ ಬಸವನು ಒಂದು ದೊಡ್ಡ ಮುದ್ದೆ ಬೆಣ್ಣೆಯನ್ನು ಕದ್ದು ತಿಂದನು.
 
'ಬಸವಾ, ಒಂದು ಮುದ್ದೆ ಬೆಣ್ಣೆನೇ ಕಾಣ್ತಾ ಇಲ್ಲವಲ್ಲೋ...'' ಎಂದು ಅಜ್ಜಿಯು ಕೇಳಿದಳು.
 
ಅಜ್ಜಿ, ನೀವು ಬಟ್ಟೆ ತೊಳೆಯಲು ಹೋಗಿದ್ದಾಗ ದೊಡ್ಡ ಕಳ್ಳಬೆಕ್ಕು ಮನೆಯೊಳಗೆ ನುಗ್ಗಿ ಬೆಣ್ಣೆಯನ್ನು ತಿಂದಿತು'' ಎಂದು ಬಸವನು ಸುಳ್ಳು ಹೇಳಿದನು.
 
ಆ ಅಜ್ಜಿಯು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಬಸವನು ಬೆಣ್ಣೆಯನ್ನು ಕದ್ದು ತಿನ್ನಲಾರಂಭಿಸಿದನು. ಅಜ್ಜಿಯು ಕೇಳಿದರೆ, ಬೆಣ್ಣೆಯನ್ನು ನಾಯಿ ತಿಂದಿತು, ಕಳ್ಳ ಬೆಕ್ಕು ತಿಂದಿತು ಎಂದು ಸುಳ್ಳು ಹೇಳುತ್ತಿದ್ದನು.
 
ಒಂದು ದಿನ ಅಜ್ಜಿಗೆ ತುಂಬಾ ಜ್ವರ ಬಂದಿತು. ಹಾಗಾಗಿ ಆಕೆ ಮೊಸರನ್ನೂ ಕಡೆಯಲಿಲ್ಲ. ಬೆಣ್ಣೆಯನ್ನೂ ತಯಾರಿಸಲಿಲ್ಲ. ಬಿಸಿಬಿಸಿಯಾಗಿ ಗಂಜಿ ತಯಾರಿಸಿಟ್ಟು, ಔಷಧಿ ತರಲೆಂದು ವೈದ್ಯರ ಬಳಿಗೆ ಹೋದಳು. ಅಜ್ಜಿಯು ಹೋದ ತಕ್ಷಣ ಬಸವನು ಅಡಿಗೆ ಮನೆಯೊಳಗೆ ಬಂದನು. ಅಜ್ಜಿಯು ಬೆಣ್ಣೆ ಇಡುತ್ತಿದ್ದ ಮಡಕೆಗಾಗಿ ಹುಡುಕಾಡಿದನು.
 
ಆ ಮಡಕೆಯಲ್ಲಿ ಅಜ್ಜಿಯು ಬಿಸಿಬಿಸಿಯಾದ ಗಂಜಿ ತಯಾರಿಸಿಟ್ಟಿದ್ದಳು. ಬಸವನು ಅವಸರದಲ್ಲಿ ಆ ಮಡಕೆಗೆ ಕೈಹಾಕಿದನು. ಸುಡುತ್ತಿದ್ದ ಬಿಸಿ ಗಂಜಿಯಿಂದಾಗಿ ಅವನ ಕೈ ಸುಟ್ಟುಹೋಯಿತು.
 
ಬಸವನು ಉರಿ ತಾಳಲಾರದೆ ಜೋರಾಗಿ ಕಿರುಚಿಕೊಳ್ಳುತ್ತಾ ಹೊರಗೆ ಓಡಿ ಬಂದನು. ಬಿಸಿ ತಾಗಿ ಅವನ ಕೈಯಲ್ಲಿ ಬೊಬ್ಬೆಗಳು ಎದಿದ್ದವು. ಕೈ ಕೆಂಪಗಾಗಿತ್ತು. 'ಅಯ್ಯೋ, ಉರಿ, ಉರಿ!ಎಂದು ಜೋರಾಗಿ ಕೂಗಿಕೊಂಡನು.
 
ಅಷ್ಟರಲ್ಲಿ ಅಜ್ಜಿಯು ಬಂದಳು. ಯಾವುದೋ ಸೊಪ್ಪಿನ ರಸವನ್ನು ತಂದು ಬಸವನ ಸುಟ್ಟ ಗಾಯಕ್ಕೆ ಹಚ್ಚಿದಳು.

ಏನು ಮಾಡಿಕೊಂಡ ಬಸವಾ?” ಎಂದು ಅಜ್ಜಿಯು ಕೇಳಿದಳು.
'ಬೆಣ್ಣೆ ಎಂದು ತಿಳಿದು ಬಿಸಿ ಗಂಜಿ ಇಟ್ಟಿದ್ದ ಮಡಕೆಗೆ ಕೈ ಹಾಕಿದೆ'' ಎಂದನು ಬಸವ.
 
ಅದಕ್ಕೇ ಅನ್ನುವುದು ಅತಿಯಾಸೆ ಪಡಬಾರದು ಎಂದು. ಈ ದುರಾಸೆಯಿಂದ ನಿನಗೆ ಕದಿಯಬೇಕೆಂದು ತೋರಿತು. ದಿನನಿತ್ಯ ಬೆಣ್ಣೆ ಕದ್ದು ತಿನ್ನುತ್ತಿದ್ದವನು ನೀನೇ ಅಲ್ಲವೇ? ಆದರೂ, ನೀನು ಸುಳ್ಳು ಹೇಳಿದೆ. ಕೊನೆಗೂ ಈ ರೀತಿಯಲ್ಲಿ ಸಿಕ್ಕಿಬಿದ್ದೆ. ಅತಿಯಾಸೆಯಿಂದಲೇ ನಿನಗೆ ಸುಟ್ಟ ಗಾಯವಾಯಿತು. ಅತಿಯಾಸೆ ಗತಿ ಕೆಡಿಸಿತು ಎನ್ನುವ ಗಾದೆಯೇ ಇದೆಯಲ್ಲ..ಎಂದಳು ಅಜ್ಜಿ.
ಬಸವ ನಾಚಿಕೆಯಿಂದ ತಲೆತಗ್ಗಿಸಿದ. ಮತ್ತೆಂದೂ ಅತಿಯಾಸೆ ಪಡಲಿಲ್ಲ ಏನನ್ನೂ ಕದಿಯಲು ಹೋಗಲಿಲ್ಲ.
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad

Search for Article