Type Here to Get Search Results !

Famous Proverb in kannada - Kannada Gadematu - ಗಾದೆಮಾತು - ಭಾಗ 2

 Table of Content (toc)

Famous Proverb in kannada - Gadematugalu in kannada - ಗಾದೆಮಾತು - ಭಾಗ 2

ಗಾದೆಮಾತು


ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ? :

ಗಿಡವು ಬೆಳೆಯುತ್ತಾ ಬೆಳೆಯುತ್ತಾ ಹೋದಂತೆ ದೃಢವಾಗುತ್ತಾ ಹೋಗುತ್ತದೆ. ಮರವಾದಾಗ ಬಲಿಷ್ಟವಾಗಿ ನಿಲ್ಲುತ್ತದೆ. ಅಲುಗಾಡಿಸಲೂ ಸಾಧ್ಯವಾಗದಷ್ಟೂ ಶಕ್ತಿಶಾಲಿಯಾಗುತ್ತದೆ. ಗಿಡವನ್ನಾದರೆ ನಾವು ಬೇಕಾದಂತೆ ಬಗ್ಗಿಸಬಹುದು, ಆದರೆ ಮರವನ್ನು ಸಾಧ್ಯವಿಲ್ಲ. ಒಂದು ವೇಳೆ, ಗಿಡವೇ ಬಗ್ಗದಂತಿದ್ದರೆ ಮರವಾದ ಮೇಲೆ ಬಗ್ಗಲು ಸಾಧ್ಯವೇ? ಹಾಗೆಯೇ ಚಿಕ್ಕಂದಿನಲ್ಲಿಯೇ ಹಿರಿಯರು ಹೇಳಿದಂತೆ ಕೇಳದ ಮಕ್ಕಳು ದೊಡ್ಡವರಾದ ಮೇಲೆ ಹೇಳಿದಂತೆ ಕೇಳಬಲ್ಲರೇ? .ಕೆಲ ಮಕ್ಕಳು ಹಿರಿಯರ ಮಾತುಗಳಿಂದ ಪ್ರಭಾವಿತರಾಗಿ ತಮ್ಮ ಹಟಮಾರಿತನವನ್ನು, ಕೆಟ್ಟ ಬುದ್ಧಿಯನ್ನು ಬಿಟ್ಟು ಒಳ್ಳೆಯವರಾಗು ತ್ತಾರೆ. ಆದರೆ ಇನ್ನು ಕೆಲವರು ಯಾರ ಮಾತನ್ನೂ ಕೇಳುವುದಿಲ್ಲ: ಯಾವ ಹಿತವಚನಗಳಿಗೂ ಜಗ್ಗುವುದಿಲ್ಲ. ತಮ್ಮ ಕೆಟ್ಟ ಬುದ್ದಿಯನ್ನು ಬಿಡುವುದಿಲ್ಲ, ಮಕ್ಕಳಾಗಿದ್ದಾಗಲೇ ತಮ್ಮ ಕೆಟ್ಟ ಬುದ್ದಿಯನ್ನು ಬಿಡದೆ ಇರುವವರು ದೊಡ್ಡವರಾದ ಮೇಲೆ ಬಿಟ್ಟುಬಿಡುವರೇ? ಸಾಧ್ಯವಿಲ್ಲ ಎನ್ನುತ್ತದೆ 'ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ?' ಎನ್ನುವ ಈ ಗಾದೆ.

ಗಾದೆಗೊಂದು ಕತೆ :

ಸಂಪತ್ತು ಎನ್ನುವ ಹುಡುಗ ಯಾರ ಮಾತನ್ನೂ ಕೇಳುತ್ತಿರಲಿಲ್ಲ ಯಾರ ಹಿತವಚನಕ್ಕೂ ಜಗ್ಗುತ್ತಿರಲಿಲ್ಲ, 'ಓದು' ಎಂದರೆ ಓದುತ್ತಿರಲಿಲ್ಲ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅಪ್ಪನ ಅಂಗಿಯ ಜೇಬಿನಿಂದ ಹಣ ಕದಿಯುತ್ತಿದ್ದನು. ಅಂಗಡಿಯಿಂದ ಬಗೆಬಗೆಯ ತಿಂಡಿ ತಿನಿಸು ಕೊಂಡು ತಿನ್ನುತ್ತಿದ್ದನು. ಅಂಗಡಿಯಿಂದ ಆಟಿಕೆಗಳನ್ನು ಕದಿಯುತ್ತಿದ್ದನು. ಸಂಪತ್ತುವಿನ ಅಜ್ಜಿ ಅಮ್ಮ ಅಪ್ಪ - ಹೀಗೇ ಎಲ್ಲರೂ ಅವನಿಗೆ ಬುದ್ದಿ ಹೇಳಿದರು. ಏಟೂ ಕೊಟ್ಟರು. ಆದರೂ ಏನೂ ಪ್ರಯೋಜನವಾಗಲಿಲ್ಲ. ಅವನು ಕದಿಯುವುದನ್ನು ನಿಲ್ಲಿಸಲಿಲ್ಲ. ಹಲವಾರು ವರ್ಷಗಳು ಕಳೆದವು. ಸಂಪತ್ತು ಈಗ ಯುವಕನಾಗಿದ್ದನು. ಅವನು ವಿದ್ಯೆ ಕಲಿತಿರಲಿಲ್ಲ ಹಾಗಾಗಿ ಅವನಿಗೆ ಒಳ್ಳೆಯ ಉದ್ಯೋಗವೂ ಸಿಕ್ಕಿರಲಿಲ್ಲ. ಊರೆಲ್ಲ ಅಲೆಯುತ್ತಿದ್ದನು, ಹಣ ಬೇಕಾದಾಗ ಕಳ್ಳತನ ಮಾಡುತ್ತಿದ್ದನು.

ಒಂದು ದಿನ, ಹೀಗೆ ಕಳ್ಳತನ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದನು. ಸಂಪತ್ತುವಿನ ತಂದೆ-ತಾಯಿ ಆ ವೇಳೆಗೆ ವೃದ್ಧರಾಗಿದ್ದರು. '' ಅಯ್ಯೋ, ನಮ್ಮ ಮಗನನ್ನು ಪೊಲೀಸರು ಹಿಡಿದುಕೊಂಡು ಹೋದರಂತೆ'' ಎಂದು ಸಂಪತ್ತುವಿನ ಅಮ್ಮ ಗೋಳಿಟ್ಟಳು.

ನಾವು ಏನು ತಾನೇ ಮಾಡಲು ಸಾಧ್ಯ? ನಮಗಂತೂ ಅವನನ್ನು ಬಾಲ್ಯದಲ್ಲಿಯೇ ತಿದ್ದಲು ಸಾಧ್ಯವಾಗಲಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ? ಇಷ್ಟು ದೊಡ್ಡವನಾದ ಮೇಲೆ ನಾವು ಅವನನ್ನು ತಿದ್ದಲು ಸಾಧ್ಯವೇ?'' ಎಂದು ತಂದೆ ಹೇಳಿದರು. ಛೇ! ಮಗ ಹೀಗಾದನಲ್ಲಾ ಎಂದು ತಾಯಿ ದುಃಖಪಟ್ಟಳು.

ಹಿತ್ತಲ ಗಿಡ ಮದ್ದಲ್ಲ :

ನಮ್ಮ ಮನೆಯ ಹಿತ್ತಲಿನಲ್ಲೇ ಔಷಧದ ಗಿಡಗಳಿರುತ್ತವೆ. ಆದರೆ, ಕಾಯಿಲೆ ಬಂದಾಗ ನಾವು ಆ ಗಿಡಗಳನ್ನು ಕಡೆಗಣಿಸುತ್ತೇವೆ. ದೂರದ ವೈದ್ಯರಲ್ಲಿಗೆ ಔಷಧಿಗಾಗಿ ಹೋಗುತ್ತೇವೆ. ಅನುಕೂಲತೆಗಳು, ಸೌಕರ್ಯಗಳು ನಮ್ಮ ಅಕ್ಕಪಕ್ಕದಲ್ಲಿಯೇ ಇದ್ದರೂ ನಾವು ಅದಕ್ಕೆ ಬೆಲೆ ಕೊಡುವುದಿಲ್ಲ, ಬದಲಾಗಿ, ದೂರದಲ್ಲಿರುವ ಅನುಕೂಲತೆಗಳು-ಸೌಕರ್ಯಗಳೇ ಅತ್ಯುತ್ತಮ ಎಂದು, ತಿಳಿದುಕೊಳ್ಳುತ್ತೇವೆ. ನಮ್ಮ ಪಕ್ಕದಲ್ಲಿಯೇ ಇರುವುದು ಎಷ್ಟೇ ಉತ್ತಮವಾಗಿದ್ದರೂ ಚೆನ್ನಾಗಿಲ್ಲ  ಎಂದೇ ಭಾವಿಸುತ್ತೇವೆ. ಹತ್ತಿರದಲ್ಲಿ ಒಳ್ಳೆಯ ಶಾಲೆ ಇದ್ದರೂ, ದೂರದ ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತೇವೆ. ಪಕ್ಕದಲ್ಲಿಯೇ ಒಳ್ಳೆಯ ಅಂಗಡಿಗಳಿದ್ದರೂ ದೂರದ ಅಂಗಡಿಗಳಿಗೆ ಹೋಗಿ ಸಾಮಾನು ತರುತ್ತೇವೆ. ನಮ್ಮ ನೆರೆಯಲ್ಲಿಯೇ ಒಳ್ಳೆಯ ವೈದ್ಯರು ಇದ್ದರೂ ವಿದೇಶಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತೇವೆ. ಹೀಗೆ, ಒಳ್ಳೆಯ ಸೌಕರ್ಯ, ಸವಲತ್ತುಗಳು ಸಮೀಪದಲ್ಲೇ ಇದ್ದರೂ ಅವನ್ನು ಕಡೆಗಣಿಸುತ್ತೇವೆ. ಎಲ್ಲೋ ದೂರದಲ್ಲಿರುವ ಸೌಕರ್ಯ, ಸವಲತ್ತುಗಳನ್ನು ಬಯಸುತ್ತೇವೆ. 'ಹಿತ್ತಲ ಗಿಡ ಮದ್ದಲ್ಲ' ಎಂಬ ಗಾದೆ ಇದನ್ನೇ ಹೇಳುತ್ತದೆ.

ಗಾದೆಗೊಂದು ಕತೆ :

ಒಬ್ಬ ಮಂತ್ರಿಯು ಸಮಾರಂಭವೊಂದರಲ್ಲಿ ಭಾಷಣ ಮಾಡುತ್ತಿದ್ದನು. ಕೊಂಚ ಹೊತ್ತು ಮಾತನಾಡಿ ಇದ್ದಕ್ಕಿದ್ದ ಹಾಗೆ ಕುಸಿದುಬಿದ್ದನು. ತಕ್ಷಣವೇ ಅವನನ್ನು ಎಲ್ಲರೂ ಸೇರಿ ಆಸ್ಪತ್ರೆಗೆ ಕರೆದೊಯ್ದರು. ನಗರದ ಒಳ್ಳೆಯ ವೈದ್ಯರು ಅವನಿಗೆ ಚಿಕಿತ್ಸೆ ನೀಡಲು ಆರಂಭಿಸಿದರು. ಮಂತ್ರಿಗಳೇ, ನಿಮಗೆ ಹೃದಯದ ಆಪರೇಷನ್ ಆಗಬೇಕು'' ಎಂದು ವೈದ್ಯರು ಹೇಳಿದರು. ಆದರೆ ಆ ಮಂತ್ರಿಗೆ ಅಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸ್ವಲ್ಪವೂ ಇಷ್ಟವಿರಲಿಲ್ಲ.

ಇಲ್ಲಿಯ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಲಾರರು. ನಾನು ವಿದೇಶಕ್ಕೆ ಹೋಗುತ್ತೇನೆ. ಅಲ್ಲಿಯೇ ಚಿಕಿತ್ಸೆ ಪಡೆಯುತ್ತೇನೆ'' ಎಂದು ಆ ಮಂತ್ರಿಯು ಹೇಳಿದನು. ಆದರೆ ನಮ್ಮಲ್ಲಿಯೂ ತಜ್ಞ ವೈದ್ಯರಿದ್ದಾರೆ. ಸಾಕಷ್ಟು ಅನುಭವವನ್ನು ಗಳಿಸಿಕೊಂಡಿದ್ದಾರೆ. ಎಷ್ಟೋ ರೋಗಿಗಳನ್ನು ವಾಸಿ ಮಾಡಿದ್ದಾರೆ'' ಎಂದು ವೈದ್ಯರು ಹೇಳಿದರು.

ತನಗೆ ವಿದೇಶದಲ್ಲಿಯೇ ಶಸ್ತ್ರಚಿಕಿತ್ಸೆ ಆಗಬೇಕು ಎಂದು ಮಂತ್ರಿಯು ಹಟ ಹಿಡಿದನು.

ಸರಿ, ನಿಮ್ಮ ಇಷ್ಟದಂತೆ ಮಾಡಿ. ಹಿತ್ತಲ ಗಿಡ ಮದ್ದಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ'' ಎನ್ನುತ್ತಾ ವೈದ್ಯರು ಹೋದರು.  ಮಂತ್ರಿಯು ಕುಟುಂಬ ಸಮೇತ ವಿದೇಶಕ್ಕೆ ಹೋದನು. ಅಲ್ಲಿನ ವೈದ್ಯರನ್ನು ಭೇಟಿಯಾದನು. ಆ ವೈದ್ಯರೂ ಭಾರತೀಯ ಮೂಲದವರೇ ಆಗಿದ್ದರು.

ನೀವು ಎಲ್ಲಿಂದ ಬಂದಿರಿ?'' ಎಂದು ಆ ವೈದ್ಯರು ವಿಚಾರಿಸಿದರು.

ನಾನು ಬೆಂಗಳೂರಿನಿಂದ ಬಂದಿರುವೆ. ಅಲ್ಲಿ ಒಳ್ಳೆಯ ವೈದ್ಯರು ಇಲ್ಲ ಎಂದು ಚಿಕಿತ್ಸೆಗಾಗಿ ಇಲ್ಲಿಗೆ ಬಂದೆ'' ಎಂದನು ಮಂತ್ರಿ. ವಿದೇಶದ ವೈದ್ಯರು ಗೊಳ್ಳನೆ ನಕ್ಕುಬಿಟ್ಟರು.

ಅಲ್ಲಿ ಒಳ್ಳೆಯ ವೈದ್ಯರು ಇಲ್ಲ ಎಂದು ಯಾರು ಹೇಳಿದರು ನಿಮಗೆ? ಅಷ್ಟಕ್ಕೂ, ನೀವು ಹೇಳಿದ ಬೆಂಗಳೂರಿನ ಆ ವೈದ್ಯರು ನಮ್ಮ ಗುರುಗಳು. ನಾವು ಅವರಿಂದಲೇ ಶಸ್ತ್ರಚಿಕಿತ್ಸೆ ಅಭ್ಯಾಸ ಮಾಡಿದವರು. ಅವರು ಇದುವರೆಗೆ ಮಾಡಿದ ಶಸ್ತ್ರಚಿಕಿತ್ಸೆಗಳೆಲ್ಲ ಸಫಲವಾಗಿವೆ. ಭಾರತದಲ್ಲಿ ನಿಮಗೆ ಕಡಿಮೆ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ಆಗುತ್ತಿತ್ತು. ವಿದೇಶದಲ್ಲಿ ಎಲ್ಲವೂ ದುಬಾರಿ'' ಎಂದರು ಆ ವೈದ್ಯರು.

ಅದು ಅದಕ್ಕೇ ಹಿತ್ತಲಗಿಡ ಮದ್ದಲ್ಲ ಎಂದು ಅವರು ಹೇಳಿದ್ದು, ಈಗಷ್ಟೇ ನನಗೆ ಅರ್ಥವಾಯಿತು'' ಎಂದನು ಮಂತ್ರಿ.

ಮಂತ್ರಿಯು ವಿದೇಶದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಅಲ್ಲಿಯೇ ವಿಶ್ರಾಂತಿ ಪಡೆದುಕೊಂಡನು. ಪುನಃ ಭಾರತಕ್ಕೆ ಮರಳಿ ಬಂದಾಗ ಆರು ತಿಂಗಳುಗಳೇ ಕಳೆದುಹೋಗಿದ್ದವು. ಅಷ್ಟರಲ್ಲಿ ಆ ಮಂತ್ರಿಯ ಸರ್ಕಾರ ಉರುಳಿತ್ತು.

 

ದೇಶ ಸುತ್ತು ಕೋಶ ಓದು :

ಓದುವುದರಿಂದ ಮಾತ್ರವಲ್ಲ ಅನುಭವದಿಂದಲೂ ಜ್ಞಾನವನ್ನು ಪಡೆದುಕೊಳ್ಳಬಹುದು. ಒಳ್ಳೆಯ ಪುಸ್ತಕಗಳನ್ನು, ಗ್ರಂಥಗಳನ್ನು ಓದುವುದರಿಂದ ಅಪಾರ ಜ್ಞಾನವು ದೊರೆಯುತ್ತದೆ. ಅಂತೆಯೇ ವಿವಿಧ ಸ್ಥಳಗಳಿಗೆ ಭೇಟಿ ನೀಡುವುದರಿಂದಲೂ ಅಪಾರ ಜ್ಞಾನವನ್ನು ಸಂಪಾದಿಸಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ದೇಶ ಸುತ್ತುವುದರಿಂದ ಮತ್ತು ಕೋಶ ಅರ್ಥಾತ್ ಪುಸ್ತಕಗಳನ್ನು ಓದುವುದರಿಂದ ನಮ್ಮ ಜ್ಞಾನವು ಅಗಾಧ ಪ್ರಮಾಣದಲ್ಲಿ ವೃದ್ಧಿಯಾಗುತ್ತದೆ. ಅದಕ್ಕೇ 'ದೇಶ ಸುತ್ತು ಕೋಶ ಓದು' ಎನ್ನುವ ಗಾದೆಯು ಪ್ರಚಲಿತದಲ್ಲಿದೆ. ದೇಶ ಸುತ್ತುವುದರಿಂದ ಆಯಾಯ ಪ್ರದೇಶದ ನೆಲ, ಜಲ, ಸಂಸ್ಕೃತಿ, ಜನ-ಜೀವನ, ಪರಿಸರದ ಬಗೆಗಿನ ಜ್ಞಾನವು ಹೆಚ್ಚುತ್ತದೆ ಅದು ಅನುಭವದಿಂದ ಸಿಗುವ ಜ್ಞಾನ ಪುಸ್ತಕ ಓದುವುದರಿಂದ ಸಿಗುವ ಜ್ಞಾನ ಇನ್ನೊಂದು ತೆರನಾದುದು.

ಕೆಲವೊಮ್ಮೆ ಬರೀ ಪ್ರವಾಸ ಹೋಗುವುದರಿಂದ ಜ್ಞಾನ ಹೆಚ್ಚುವುದಿಲ್ಲ. ಜೊತೆಗೆ ಪುಸ್ತಕವನ್ನೂ ಓದಬೇಕಾಗುತ್ತದೆ. ಮಾಹಿತಿ ಕಲೆಹಾಕಬೇಕಾಗುತ್ತದೆ. ಉದಾಹರಣೆಗೆ ಬೇಲೂರು-ಹಳೇಬೀಡಿನ ಐತಿಹಾಸಿಕ ದೇವಾಲಯಗಳನ್ನು ಸುಮ್ಮನೆ ನೋಡುತ್ತಾ ಹೋದರೆ ಆ ದೇವಾಲಯಗಳ ಬಗೆಗಿನ ಯಾವುದೇ ಇತಿಹಾಸ, ವಿವರಗಳು ದೊರೆಯುವುದಿಲ್ಲ. ಆ ದೇವಾಲಯಗಳು ಇತಿಹಾಸದ ಬಗ್ಗೆ ಅಲ್ಲಿನ ಶಿಲ್ಪಗಳ ಬಗೆಗೆ ಪುಸ್ತಕಗಳನ್ನು ಓದಿ ನಂತರ ವೀಕ್ಷಿಸಿದರೆ ನಮಗೆ ಹೆಚ್ಚಿನ ಜ್ಞಾನವು ಸಿಗುತ್ತದೆ. ಅದೇ ರೀತಿ, ಸೂರ್ಯಾಸ್ತಮಾನದ ಬಗ್ಗೆ ಓದುವುದಕ್ಕಿಂತಲೂ, ಕಡಲ ತೀರಕ್ಕೆ ಹೋಗಿ ಸೂರ್ಯಾಸ್ತಮಾನವನ್ನೇ ಕಣ್ಣಾರೆ ನೋಡುವುದರಿಂದ, ಅದರ ಸೊಬಗನ್ನು ಸವಿಯುವುದರಿಂದ ನಮ್ಮಲ್ಲಿ ಹೆಚ್ಚಿನ ಅರಿವು ಉಂಟಾಗುತ್ತದೆ. ಅದಕ್ಕೇ ದೇಶವನ್ನೂ ಸುತ್ತಬೇಕು, ಕೋಶವನ್ನೂ ಓದಬೇಕು ಎನ್ನುತ್ತದೆ ಈ ಗಾದೆ.

ಗಾದೆಗೊಂದು ಕತೆ:

ರಶ್ಮಿ , ನಾನು ಮತ್ತು ತಾತ ಪಾರ್ಕಿಗೆ ಹೋಗ್ತಿವಿ. ನೀನೂ ಬರ್ತೀಯಾ?''  ದೀಪು ತನ್ನ ಅಕ್ಕನೊಡನೆ ಕೇಳಿದ.

 ನಾನು ಬರಲ್ಲ ಕಣೋ. ನಾನು ಓದ್ದೇಕು'' ಎಂದಳು ರಶ್ಮಿ

  ಯಾವಾಗ ನೋಡಿದ್ರೂ ಓದು....ಓದು...! ಅಬ್ಬಬ್ಬಾ! ಹೇಗೆ ಅಷ್ಟೊಂದು ಓದ್ದೀಯೋ?'' ಎನ್ನುತ್ತಾ ದೀಪು ತಾತನ ಓಡಿದ.

 ರಶ್ಮಿ ದಿನನಿತ್ಯ ಓದುವುದರಲ್ಲಿಯೇ ಕಾಲ ಕಳೆಯುತ್ತಿದ್ದಳು. ಓದುವುದನ್ನು ಬಿಟ್ಟರೆ ಬೇರೇನೂ ಅವಳಿಗೆ ತಿಳಿದೇ ಇರಲಿಲ್ಲ ಆದರೆ ದೀಪುವಿಗೆ ಓದಲು ಮನಸ್ಸೇ ಬಾರದು. ಹೊರಗೆ. ತಿರುಗಾಡುವುದೆಂದರೆ ಅವನಿಗೆ ಬಹಳ ಇಷ್ಟ. ಶಾಲೆಯಿಂದ ಬಂದ ತಕ್ಷಣ ಊರೆಲ್ಲ ಸುತ್ತುತ್ತಿದ್ದ.

ಪರೀಕ್ಷೆ ಹತ್ತಿರ ಬರುತ್ತಿತ್ತು. ರಶ್ಮಿ ಇನ್ನೂ ಹೆಚ್ಚಿನ ಅಭ್ಯಾಸಗಳಲ್ಲಿ ತೊಡಗಿದಳು. ಅವಳು ಮನೆಯಿಂದ ಹೊರಗೆ ಕಾಲಿಡುತ್ತಲೇ ಇರಲಿಲ್ಲ. ಸದಾ ಓದು ಓದು.... ಎನ್ನುತ್ತಾ ತನ್ನ ಕೊಠಡಿಯಲ್ಲಿಯೇ ಕುಳಿತು ಓದುತ್ತಿದ್ದಳು. ದೀಪು ಕೊಂಚ ಹೊತ್ತು ಓದಿದಂತೆ ನಟಿಸುತ್ತಿದ್ದ. ನಂತರ ಪುಸ್ತಕವನ್ನು ಚೀಲಕ್ಕೆ ತುಂಬಿಸಿ ಬೀದಿ-ಬೀದಿ ಸುತ್ತಲು ಹೋಗುತ್ತಿದ್ದ.

ಪರೀಕ್ಷೆ ಕಳೆಯಿತು. ಕೆಲವು ದಿನಗಳ ಬಳಿಕ ಟೀಚರ್ ಅಂಕಪಟ್ಟಿಯನ್ನು ಕೊಟ್ಟರು. ಎಂದಿನಂತೆ ರಶ್ಮಿಯು ತರಗತಿಗೇ ಮೊದಲಿಗಳಾಗಿದ್ದಳು. ದೀಪುವು ಕೆಲವು ಪರೀಕ್ಷೆಗಳಲ್ಲಿ ಫೇಲಾಗಿದ್ದ, ಮನೆಯಲ್ಲಿ ಎಲ್ಲರೂ ದೀಪುವಿಗೆ ಛೀಮಾರಿ ಹಾಕಿದರು. ದೀಪುವು ಮುಖ ಸಪ್ಪಗೆ ಮಾಡಿಕೊಂಡು ಕುಳಿತ, ಪುಸ್ತಕ ಅಂದರೆ ಜ್ಞಾನಭಂಡಾರ ಇದ್ದ ಹಾಗೆ. ಓದಬೇಕೋ ದೀಪು, ಓದಿದ್ರೆ ನಿಂಗೆ ಎಲ್ಲಾ ವಿಷಯಾನೂ ತಿಳಿಯುತ್ತೆ'' ಎಂದು ತಮ್ಮನಿಗೆ ಕಿವಿಮಾತು ಹೇಳಿದಳು.

ರಶ್ಮಿ ಮತ್ತು ದೀಪು ಯಾವಾಗಲೂ ಆಟೋರಿಕ್ಷಾದಲ್ಲಿ ಶಾಲೆಗೆ ಹೋಗುತ್ತಿದ್ದರು. ಅದರಲ್ಲೇ ಮನೆಗೆ ಮರಳುತ್ತಿದ್ದರು. ಒಂದು ದಿನ, “ಮಕ್ಕಳೇ, ಇವತ್ತು ಸಂಜೆ ನಾನು ಬರುವುದಿಲ್ಲ. ನನ್ನ ಅಮ್ಮನಿಗೆ ಹುಷಾರಿಲ್ಲ, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕುಎಂದು ಆಟೋಮಾಮನು ಹೇಳಿದನು.

ರಶ್ಮಿ, ದೀಪು, ಹಾಗಾದರೆ ಸಂಜೆ ನಿಮ್ಮ ಗೆಳೆಯರ ಜೊತೆಯಲ್ಲಿ ಹುಷಾರಾಗಿ ನಡೆದುಕೊಂಡು ಬನ್ನಿ.'' ಎ೦ದು ಅಮ್ಮ ಕೂಗಿ ಹೇಳಿದರು.

ಸಂಜೆ ದೀಪುವು ನಡೆದುಕೊಂಡೇ ಮನೆಗೆ ಬಂದನು. ರಶ್ಮಿ ಎಲ್ಲೋ...'' ಎಂದು ತಾತ ಕೇಳಿದರು.

ಗೊತ್ತಿಲ್ಲ ತಾತ. ಬಹುಶ: ಗೆಳತಿಯರ ಜೊತೆಯಲ್ಲಿ ನಿಧಾನವಾಗಿ ಬರುತ್ತಿರಬೇಕುಎಂದು ಹೇಳಿದನು ದೀಪು.

ಆದರೆ, ನಡೆದ ಸಂಗತಿ ಬೇರೆಯೇ ಆಗಿತ್ತು! ರಶ್ಮಿಯ ಗೆಳತಿಯರು ತಮ್ಮ ತಮ್ಮ ಅಪ್ಪಂದಿರ ಜೊತೆಯಲ್ಲಿ ಹೊರಟು ಹೋಗಿದ್ದರು. ರಶ್ಮಿ ಒಬ್ಬಳೇ ನಡೆದುಕೊಂಡು ಬರಬೇಕಾಯ್ತು. ರಶ್ಮಿಗೆ ಓದುವುದು ಮಾತ್ರ ಗೊತ್ತಿತ್ತು ಹೊರಗಿನ ಪ್ರಪಂಚದ ಜ್ಞಾನ ಕಿಂಚಿತ್ತೂ ಇರಲಿಲ್ಲ. ಶಾಲೆಯಿಂದ ಮನೆಗೆ ಹೋಗುವ ದಾರಿಯೇ ಸರಿಯಾಗಿ ತಿಳಿದಿರಲಿಲ್ಲ, ರಸ್ತೆ ದಾಟಲೂ ಅವಳಿಗೆ ಭಯ ಎನ್ನಿಸುತ್ತಿತ್ತು ರಶ್ಮಿ ಹಲವಾರು ಬೀದಿಗಳನ್ನು ಸುತ್ತಿದಳು. ಮನೆಗೆ ಹೋಗುವ ದಾರಿ ತಪ್ಪಿತ್ತು ಮನೆಗೆ ಫೋನ್ ಮಾಡಿ ವಿಷಯ ತಿಳಿಸೋಣ ಎಂದರೆ ಮನೆಯ ಫೋನ್‌ನಂಬರ್ ಕೂಡ ಅವಳಿಗೆ ಗೊತ್ತಿರಲಿಲ್ಲ, ನಡೆದು ನಡೆದು ಆಕೆಗೆ ಆಯಾಸವಾಗಿತ್ತು ಹಸಿವೆ, ಬಾಯಾರಿಕೆಯಿಂದ ಬಳಲಿದಳು. ಕೊನೆಗೆ, ಬೀದಿ ಬದಿಯ ಕಲ್ಲುಬೆಂಚಲ್ಲಿ ಕುಳಿತು ಅಳತೊಡಗಿದಳು.

ಷ್ಟು ಹೊತ್ತಾದರೂ ರಶ್ಮಿ ಬಾರದೆ ಇದ್ದುದನ್ನು ಕಂಡು ತಾತ ಮತ್ತು ದೀಪು ಅವಳನ್ನು ಹುಡುಕಿಕೊಂಡು ಹೊರಟರು. ಬೀದಿ ಬದಿಯ ಕಲ್ಲು ಬೆಂಚಲ್ಲಿ ಕುಳಿತು ಅಳುತ್ತಿರುವ ರಶ್ಮಿಯನ್ನು ಕಂಡರು. ಸ್ಕೂಲಿಂದ ಮನೆಗೆ ಬರೋ ದಾರಿ ಗೊತ್ತಿಲ್ವಾ? ಬರೀ ಪೆದ್ದಿ ಕಣೇ ನೀನು'' ಎಂದು ದೀಪು ಗೇಲಿ ಮಾಡಿ ನಕ್ಕ.

ನಂಗೆ ಹೇಗೋ ಗೊತ್ತಾಗಬೇಕು? ಸ್ಕೂಲಿಂದ ನಾನು ನಡೆದುಕೊಂಡು ಬರಿರೋದು ಇದೇ ಮೊದಲು. ಅದೂ ಒಬ್ಲೆ!'' ಎಂದಳು ರಶ್ಮಿ

ನಾವು ಓದಲೂ ಬೇಕು. ಹೊರಗಿನ ಪ್ರಪಂಚದ ಜ್ಞಾನವನ್ನೂ ಪಡೆಯಬೇಕು. ಓದಿನಿಂದಲೂ ಜ್ಞಾನ ದೊರೆಯುತ್ತದೆ. , ಅನುಭವದಿಂದಲೂ ಜ್ಞಾನ ದೊರೆಯುತ್ತದೆ. ಅದಕ್ಕೇ ಗಾದೆ ಇರೋದು - 'ದೇಶ ಸುತ್ತು ಕೋಶ ಓದು' ಅಂತ. ದೇಶವನ್ನೂ ಸುತ್ತಬೇಕು, ಪುಸ್ತಕವನ್ನೂ ಓದಬೇಕು. ಇನ್ನಾದರೂ ತಿಳಿದುಕೊಳ್ಳಿ'” ಎಂದರು ತಾತ.

ರಶ್ಮಿ ಮತ್ತು ದೀಪುವಿಗೆ ತಾತ ಹೇಳಿದ್ದು ಏನೆಂದು ಅರ್ಥವಾಯಿತು. ಅಂದಿನಿಂದ ದೀಪುವೂ ಓದುವುದರ ಕಡೆಗೆ ಗಮನಹರಿಸತೊಡಗಿದ. ರಶ್ಮಿಯ ರಜೆ ಇದ್ದಾಗಲೆಲ್ಲ ತಾತನ ಜೊತೆಯಲ್ಲಿ ಹೊರಗೆ ಸುತ್ತಾಡತೊಡಗಿದಳು.

ಪಾಲಿಗೆ ಬಂದದ್ದು ಪಂಚಾಮೃತ

ಪಂಚಾಮೃತ ಎಂದರೆ ದೇವರ ತೀರ್ಥ. ಏನೊಂದೂ ಎದುರು ಹೇಳದೆ ದೇವರ ಪ್ರಸಾದವನ್ನು ನಾವು ಭಕ್ತಿಯಿಂದ ಸ್ವೀಕರಿಸುತ್ತೇವೆ. ಹಾಗೆಯೇ, ಬದುಕಿನಲ್ಲಿ ನಮಗೆ ಏನೇನು ಸಿಕ್ಕಿದೆಯೋ ಅದನ್ನು ನಾವು 'ಪಂಚಾಮೃತ - ದೇವರ ತೀರ್ಥದಂತೆ' ಎಂದುಕೊಂಡು ಸ್ವೀಕರಿಸಬೇಕು. 'ನನಗೆ ಅದು ಸಿಗಲಿಲ್ಲ ಇದು ಸಿಗಲಿಲ್ಲ ಎಂದು ದುಃಖಿಸುತ್ತಾ ಕೂರಬಾರದು. ಇದ್ದುದರಲ್ಲಿಯೇ ತೃಪ್ತಿ ಪಡಬೇಕು. ಪಡೆದುಕೊಂಡದ್ದರಲ್ಲಿಯೇ ನೆಮ್ಮದಿಯನ್ನು ಕಾಣಬೇಕು. ಆಗ ನಮ್ಮ ಜೀವನವೂ ಸುಖ, ಸಂತೋಷದಿಂದ ಕೂಡಿರುತ್ತದೆ.

ಗಾದೆಗೊಂದು ಕತೆ

ಒಂದಾನೊಂದು ಕಾಲದಲ್ಲಿ ಹಿಮಾಲಯ ಪರ್ವತದ ತಪ್ಪಲಲ್ಲಿ ಗುಣಶೀಲ ಎನ್ನುವ ರಾಜನು ಆಳುತ್ತಿದ್ದನು. ಅವನಿಗೆ ಪದ್ಮಕುಮಾರ ಮತ್ತು ಪದ್ಮಕಲಾ ಎನ್ನುವ ಇಬ್ಬರು ಮಕ್ಕಳಿದ್ದರು.

ಗುಣಶೀಲನು ಇಬ್ಬರು ಮಕ್ಕಳಿಗೂ ಒಳ್ಳೆಯ ಶಿಕ್ಷಣ ಕೊಡಿಸಿದನು. ತನ್ನ ಮಗಳು ಪದ್ಮಕಲಾಳನ್ನು ನೆರೆಯ ರಾಜ್ಯದ ರಾಜಕುಮಾರ ಸೂರ್ಯಕೀರ್ತಿಗೆ ಕೊಟ್ಟು ಮದುವೆ ಮಾಡಿದನು. ಪದ್ಮಕುಮಾರನನ್ನು ಸಿಂಹಾಸನದಲ್ಲಿ ಕೂರಿಸಿ, ಗುಣಶೀಲನು ತಪಸ್ಸು ಮಾಡಲು ಕಾಡಿಗೆ ಹೊರಟುಹೋದನು.

 

ಒಂದು ದಿನ, ಇದ್ದಕ್ಕಿದ್ದಂತೆ ಸೂರ್ಯಕೀರ್ತಿಯ ರಾಜ್ಯದೊಳಕ್ಕೆ ಶತ್ರು ಸೈನಿಕರು ನುಗ್ಗಿದರು. ರಾಜ ಸೂರ್ಯಕೀರ್ತಿ ಶೂರನಂತ ಹೋರಾಡಿದನು. ಶತ್ರುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹಾಗಾಗಿ, ಸೂರ್ಯಕೀರ್ತಿಯನ್ನು ಶತ್ರುರಾಜನು ಸೋಲಿಸಿ ಬಂಧಿಸಿದನು. ಆತನ ರಾಜ್ಯವನ್ನು ವಶಪಡಿಸಿಕೊಂಡನು.

ಪದ್ಮಕಲಾಳಿಗೆ ಏನು ಮಾಡಲೂ ತೋಚಲಿಲ್ಲ ಅವಳ ಜೊತೆ ವೃದ್ದ ದಾಸಿಯೊಬ್ಬಳಿದ್ದಳು. ಅವಳು ರಾಣಿ ಪದ್ಮಕಲಾಳನ್ನು ದಾಸಿಯಂತೆಯೇ ವೇಷ ಧರಿಸಲು ಹೇಳಿದಳು. ಯಾರಿಗೂ ತಿಳಿಯದಂತೆ ಅವರಿಬ್ಬರೂ ಅರಮನೆಯಿಂದ ತಪ್ಪಿಸಿಕೊಂಡು ಬಂದರು.

 

ರಾಣಿ ಪದ್ಮಕಲಾ, ತನ್ನ ಅಣ್ಣ ಪದ್ಮಕುಮಾರನ ರಾಜ್ಯಕ್ಕೆ ಬಂದಳು. ತನಗೆ ಬಂದೊದಗಿದ ಕಷ್ಟವನ್ನು ಹೇಳಿಕೊಂಡಳು. ಅಣ್ಣಾ, ನನ್ನ ಗಂಡ ಶತ್ರುಗಳ ವಶದಲ್ಲಿದ್ದಾರೆ. ಅವರನ್ನು ಬಿಡಿಸಲು ಸಹಾಯ ಮಾಡುವೆಯಾ?'' ಎಂದು ಪದ್ಮಕಲಾ ಕೇಳಿಕೊಂಡಳು.

ರಾಜ ಪದ್ಮಕುಮಾರನು ಅಹಂಕಾರಿಯಾಗಿದ್ದನು. ತಾನು ಮಹಾರಾಜ ಎನ್ನುವ ಅಹಂಕಾರ ಆತನಲ್ಲಿತ್ತು ನಿನ್ನ ಗಂಡನಿಗೆ ಸಹಾಯ ಮಾಡಲು ನನ್ನಿಂದಾಗದು. ಬೇಕಿದ್ದರೆ, ನೀನು ನನ್ನ ಅರಮನೆಯಲ್ಲಿಯೇ ಇರಬಹುದು'' ಎಂದು ಪದ್ಮಕುಮಾರನು ನುಡಿದನು.

ಅರಮನೆಯಲ್ಲಿ ಸುಮ್ಮನೆ ಕುಳಿತು ನಾನೇನು ಮಾಡಲಿ? ನನಗಾಗಿ ಐದು ಹಳ್ಳಿಯನ್ನಾದರೂ ಬಿಟ್ಟುಕೊಡು. ನಾನು ಅಲ್ಲಿ ರಾಜ್ಯಭಾರ ಮಾಡಿಕೊಂಡಿರುತ್ತೇನೆ'' ಎಂದು ಪದ್ಮಕಲಾ ಹೇಳಿದಳು.

ಇಲ್ಲ ಅದಾಗದು. ಬೇಕಿದ್ದರೆ ಅಪ್ಪ ತಪಸ್ಸು ಮಾಡುವ ಕಾಡು, ಅದರ ಸುತ್ತಮುತ್ತಲಿನ ಪ್ರದೇಶವನ್ನು ನೀನು ತೆಗೆದುಕೊ. ನೆನಪಿರಲಿ, ದೇವಾಲಯದ ಈಚೆಗೆ ನಿನ್ನ ಆಡಳಿತವಿರಕೂಡದು'' ಎಂದನು ಪದ್ಮಕುಮಾರ. ರಾಣಿ ಪದ್ಮಕಲಾ ದುಃಖಿಸುತ್ತಾ ಕುಳಿತಳು. ಪದ್ಮಕುಮಾರ ದಾನವಾಗಿ ಕೊಟ್ಟ ಪ್ರದೇಶ ಸ್ವಲ್ಪವೂ ಚೆನ್ನಾಗಿರಲಿಲ್ಲ. ಒಂದು ಕಾಡಿನಲ್ಲಿ ಋಷಿಮುನಿಗಳಿದ್ದರೆ, ಇನ್ನೊಂದು ಕಾಡಿನಲ್ಲಿ ಕಳ್ಳಕಾಕರು ವಾಸಿಸುತ್ತಿದ್ದರು. ಜನರು ಆ ಪ್ರದೇಶಕ್ಕೆ ಹೋಗಲು ಭಯ ಪಡುತ್ತಿದ್ದರು. ಕಾಡಿನ ಪಕ್ಕ ನಾಲ್ಕು ಹಳ್ಳಿಗಳಿದ್ದವು. ಅಲ್ಲಿ ಕೆಲವೇ ಕೆಲವು ಜನರು ವಾಸಿಸುತ್ತಿದ್ದರು. ಆ ಪ್ರದೇಶವೋ ಕಳ್ಳಕಾಕರಿಂದ ತುಂಬಿದೆ. ಜೊತೆಗೆ ಭೂಮಿಯೂ ಚೆನ್ನಾಗಿಲ್ಲ. ಛೇ! ಅಂಥ ಜಾಗಕ್ಕೆ ಹೋಗಿ ನಾನೇನು ಮಾಡಲಿ? ನನಗೆ ಈ ದುರ್ಗತಿ ಬಂತಲ್ಲ, ನನ್ನ ಗಂಡನನ್ನು ಹೇಗೆ ಬಿಡಿಸಿಕೊಳ್ಳಲಿ? ಎಂದು ರಾಣಿ ಪದ್ಮಕಲಾ ದಿನನಿತ್ಯ ದುಃಖಿಸತೊಡಗಿದಳು.

ಇದನ್ನು ವೃದ್ದ ದಾಸಿಯು ಕಂಡಳು. ''ಮಹಾರಾಣಿ, ವೃಥಾ ದುಃಖಿಸಬೇಡಿ. ಮಹಾರಾಜರು ನಿಮಗೆ ಅಷ್ಟು ಭೂಮಿಯ ನ್ನಾದರೂ ಕೊಟ್ಟಿರುವರಲ್ಲ ಅದಕ್ಕಾಗಿ ಸಂತಸ ಪಡಿ. ಪಾಲಿಗೆ ಬಂದದ್ದು ಪಂಚಾಮೃತ ಎಂದು ತಿಳಿದುಕೊಳ್ಳಿ. ಆ ಪ್ರದೇಶದಲ್ಲಿ ಕಳ್ಳರು ಮಾತ್ರವಲ್ಲ, ಋಷಿಗಳ, ನಿಮ್ಮ ತಂದೆಯವರೂ ವಾಸಿಸುತ್ತಿರುವರು ಅಲ್ಲವೇ? ಅವರು ಏನಾದರೊಂದು ದಾರಿ ತೋರಿಸಬಹುದು' ಎಂದು ದಾಸಿಯು ಬುದ್ಧಿಮಾತು ಹೇಳಿದಳು.

 

ಪದ್ಮಕಲಾಳಿಗೂ ಇದು ಸರಿ ಎಂದು ತೋರಿತು. ದಾಸಿಯೊಂದಿಗೆ ಬೆಟ್ಟ, ಕಾಡುಗಳಿರುವ ಆ ಪ್ರದೇಶಕ್ಕೆ ಹೋದಳು. ಋಷಿಗಳನ್ನು, ತನ್ನ ತಂದೆ ಗುಣಶೀಲನನ್ನು ಭೇಟಿ ಆದಳು. ಅವರ ಆಶೀರ್ವಾದ, ಸಲಹೆಗಳನ್ನು ಪಡೆದುಕೊಂಡಳು. ಅಲ್ಲಿನ ಹಳ್ಳಿಗಳಿಗೆ ಹೋಗಿ ಜನರ ಕಷ್ಟಗಳನ್ನು ತಿಳಿದುಕೊಂಡಳು. ಜನರಿಗೆ ಆಕಯನ್ನು ಕಂಡು ಬಹಳ ಸಂತೋಷವಾಯಿತು.

ರಾಣಿಗೆ ವಾಸಿಸಲು ಯೋಗ್ಯವಾದ ಅರಮನೆಯನ್ನು ಹಳ್ಳಿಯ ಜನರೇ ಕಟ್ಟಿಕೊಟ್ಟರು. ರಾಣಿಯು ಹಳ್ಳಿಯ ಜನರಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಿಕೊಟ್ಟಳು. ಬಾವಿ, ಕೆರೆಗಳನ್ನು ತೋಡಿಸಿದಳು. ದೇವಸ್ಥಾನಗಳನ್ನು ಕಟ್ಟಿಸಿದಳು. ಹಳ್ಳಿಯವರ ಸಹಾಯದಿಂದ ಕಾಡಿನಲ್ಲಿರುವ ಕಳ್ಳರನ್ನು ನಾಡಿಗೆ ಕರೆದು ತಂದಳು. ಕಳ್ಳರೂ ಅವಳ ಒಳ್ಳೆಯ ಕೆಲಸಗಳಿಂದ ಪ್ರಭಾವಿತರಾದರು; ಕಳ್ಳತನವನ್ನು ಬಿಟ್ಟುಬಿಟ್ಟು ಒಳ್ಳೆಯ ಮನುಷ್ಯರಾದರು. ರಾಣಿಯು ಅಳುವ ಪ್ರದೇಶದಲ್ಲಿ ಜನರು ಸುಖ, ನೆಮ್ಮದಿಯಿಂದ ಬಾಳತೊಡಗಿದರು.

ಕೆಲವು ವರ್ಷಗಳ ನಂತರ ರಾಣಿಯು ದೊಡ್ಡ ಸೈನ್ಯ ಕಟ್ಟಿದಳು. ಶತ್ರುರಾಜ್ಯಕ್ಕೆ ದಂಡೆತ್ತಿ ಹೋದಳು. ಶತ್ರು ರಾಜನನ್ನು ಸೋಲಿಸಿ ಬಂಧನದಲ್ಲಿದ್ದ ತನ್ನ ಸರ್ದಕೀರ್ತಿಯನ್ನು ಬಿಡುಗಡೆಗೊಳಿಸಿದಳು. ಮುಂದೆ ಅವರಿಬ್ಬರೂ ಸಂತೋಷದಿಂದ, ಬಾಳಿದರು. ಪಾಲಿಗೆ ಬಂದದ್ದು ಪಂಚಾಮೃತ ಎಂದು ಬದುಕಿನಲ್ಲಿ ನಗೆ ಸಿಕ್ಕಿದ್ದನ್ನು ಸ್ವೀಕರಿಸಿದ್ದೇ ರಾಣಿಯ ಯಶಸ್ಸಿಗೆ ಕಾರಣವಾಯಿತು.

 

 ಉಂಡ ಮನೆಗೆ ಎರಡು ಬಗೆಯಬಾರದು

ನಾವು ಹಸಿವಿನಿಂದ ಬಳಲುತ್ತಿರುವಾಗ ಯಾರೋ ನಮಗೆ ಊಟ ನೀಡುತ್ತಾರೆ; ಕಾಯಿಲೆಯಿಂದ ನರಳುತ್ತಿರುವಾಗ ಯಾರೋ ನಮ್ಮನ್ನು ಉಪಚರಿಸುತ್ತಾರೆ; ನಾವು ಕಷ್ಟದಲ್ಲಿದ್ದಾಗ ಯಾರೋ ನಮಗೆ ಸಹಾಯ ಮಾಡುತ್ತಾರೆ. ಹೀಗೆ ಕಷ್ಟ ಕಾಲದಲ್ಲಿ ನಮಗೆ ನೆರವಾದವರಿಗೆ ನಾವು ಮೋಸ ವಂಚನೆ ಮಾಡಬಾರದು . ಅವರು ಮಾಡಿದ ಉಪಕಾರಕ್ಕೆ ನಾವು ಅವರಿಗೆ ಕೃತಜ್ಞರಾಗಿರಬೇಕು.

ಎಂದಿಗೂ ಅವರಿಗೆ ದ್ರೋಹ ಬಗೆಯಬಾರದು. ನಾವು ಯಾವ ಮನೆಯಲ್ಲಿ ಎರಡು ತುತ್ತು ಊಟ ಮಾಡಿರುವೆವೋ, ಆ ಮನೆಗೆ ಎಂದೂ ಕೇಡು ಬಗೆಯಬಾರದು. “ಉಂಡ ಮನೆಗೆ ಎರಡು ಬಗೆಯಬಾರದು” ಎಂಬ ಗಾದೆಯ ಅರ್ಥ ಇದುವೇ.

ಗಾದೆಗೊಂದು ಕತೆ:

 ಒಂದು ಊರಿನಲ್ಲಿ ಚಂದ್ರಪ್ಪ ಎಂಬ ಸಾಹುಕಾರನಿದ್ದನು. ಅವನ ಮಡದಿ ಲಕ್ಷ್ಮಿ ಇಬ್ಬರೂ ಬಹಳ ಒಳ್ಳೆಯವರಾಗಿದ್ದರು. ಕೈಲಾಗದವರಿಗೆ ಸಹಾಯ ಮಾಡುತ್ತಿದ್ದರು. ಅವರಿಗೆ ವಿನಯ ಎಂಬ ಪುಟ್ಟ ಮಗನಿದ್ದನು.

ಒಂದು ದಿನ ಚಂದ್ರಪ್ಪ ಮತ್ತು ಲಕ್ಷ್ಮಿ ದೇವಸ್ಥಾನಕ್ಕೆ ಹೊರಟರು. ಪೂಜೆ ಮುಗಿಸಿ ದೇವಸ್ಥಾನದಿಂದ ಹೊರಗೆ ಬರುವಾಗ, ಒಬ್ಬ ಹೆಂಗಸನ್ನು ಕಂಡರು. ಅವಳು ಗಡಗಡನೆ ನಡುಗುತ್ತಾದೇವಸ್ಥಾನದ ಮೆಟ್ಟಿಲ ಮೇಲೆ ಮಲಗಿದ್ದಳು. ಪಾಪ! ಆ ಹೆಂಗಸು ಜ್ವರದಿಂದ ಬಳಲುತ್ತಿದ್ದಳು. ಅವಳಿಗೆ ಸರಿಯಾಗಿ ಕುಳಿತುಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ

ಲಕ್ಷ್ಮಿಗೆ ಆ ಹೆಂಗಸನ್ನು ಕಂಡು ಕರುಣೆ ಉಕ್ಕಿ ಬಂತು. 'ಪಾಪ! ಯಾರೋ ಏನೋ? ನಾವು ಅವಳನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸೋಣವೇ?” ಎಂದು ಗಂಡನಲ್ಲಿ ಕೇಳಿದಳು. ಚಂದ್ರಪ್ಪನು ಒಪ್ಪಿದನು.

ಆವರು ಆ ಹೆಂಗಸನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಔಷಧ ಕೊಡಿಸಿದರು.

ಆ ಹೆಂಗಸು ತನ್ನ ಹೆಸರು ಸರಸು ಎಂದು ಹೇಳಿದಳು. ತನಗೆ ಯಾರೂ ಇಲ್ಲ ತಾನೊಬ್ಬ ಅನಾಥೆ, ತನ್ನ ಗಂಡ ಈಜಲು ಹೋಗಿ ಸತ್ತುಹೋದ, ತನ್ನ ಮನೆ ಭಸ್ಮವಾಯಿತು ಎಂದು ಅತ್ತಲು.

ಚಂದ್ರಪ್ಪ ಮತ್ತು ಲಕ್ಷ್ಮಿ ಗೆ ಅವಳ ಕಥೆ ಕೇಳಿ 'ಅಯ್ಯೋ ಪಾಪ' ಎನಿಸಿತು. 'ಸರಸು, ನಮ್ಮ ಮನೆಗೆ ಬಾ. ನಮ್ಮ ಮನೆಯಲ್ಲಿಯೇ ಕೆಲಸ ಮಾಡಿಕೊಂಡಿರು. ನಮ್ಮ ಮಗನನ್ನು ನೋಡಿಕೊಳ್ಳುವ ಕೆಲಸ ನಿನ್ನದು' ಎಂದು ಹೇಳಿ, ಅವರು ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು.

ಸಾಹುಕಾರನ ಮಗ ವಿನಯನನ್ನು ನೋಡಿಕೊಳ್ಳುವ ಕೆಲಸವನ್ನು ಸರಸು ಮಾಡತೊಡಗಿದಳು. ಅವನಿಗೆ ಊಟ ಮಾಡಿಸುತ್ತಿದ್ದಳು. ಸ್ನಾನ ಮಾಡಿಸುತ್ತಿದ್ದಳು. ಚಂದ್ರಪ್ಪ ಮತ್ತು ಲಕ್ಷ್ಮಿ ಸರಸುವಿಗೆ ಸಮಯಕ್ಕೆ ಸರಿಯಾಗಿ ಸಂಬಳ ಕೊಡುತ್ತಿದ್ದರು. ಊಟ-ತಿಂಡಿ ಬಟ್ಟೆಬರೆಗಳನ್ನು ನೀಡುತ್ತಿದ್ದರು. ಆದರೂ, ಸರಸುವಿಗೆ ಸಾಹುಕಾರನ ಸಿರಿ, ಸಂಪತ್ತನ್ನು ಕಂಡಾಗ ದುರಾಸೆ ಉಂಟಾಗುತ್ತಿತ್ತು. ಆ ಮನೆಯಲ್ಲಿರುವ ಚಿನ್ನ, ಒಡವೆಗಳನ್ನೂ ತಾನೂ ಹಾಕಿಕೊಳ್ಳಬೇಕು, ಸಾಹುಕಾರನಂತೆಯೇ ದೊಡ್ಡ ಬಂಗಲೆಯಲ್ಲಿ ವಾಸಿಸಬೇಕು ಎಂದು ಯೋಚಿಸತೊಡಗಿದಳು.

ಒಂದು ದಿನ, ಲಕ್ಷ್ಮೀಕಾಯಿಲೆಯಿಂದ ಮಲಗಿದ್ದಳು. ಚಂದ್ರಪ್ಪ ಮನೆಗೆ ಬೇಕಾದ ಸಾಮಾನು ತರಲೆಂದು ಪೇಟೆಗೆ ಹೋಗಿದ್ದನು. ಇದೇ ತಕ್ಕ ಸಮಯ ಎಂದು ಯೋಚಿಸಿದ ಸರಸುವು ಮಗುವಿನ ಕೊರಳಲ್ಲಿದ್ದ ಹಾರ, ಕಪಾಟಿನಲ್ಲಿ ಹಣ, ಒಡವೆಗಳನ್ನು ಗಂಟು ಕಟ್ಟಿಕೊಂಡಳು. ಯಾರಿಗೂ ತಿಳಿಯದಂತೆ ಮನೆಯಿಂದ ಕಾಲು ಕಿತ್ತಳು.

ಪಟ್ಟಣಕ್ಕೆ ಹೋಗಬೇಕಾದರೆ ದಟ್ಟಕಾಡನ್ನು ದಾಟಬೇಕಾಗಿತ್ತು, ತಾನು ಕದ್ದು ತಂದಿದ್ದ ಗಂಟನ್ನು ಕೈಯಲ್ಲಿ ಭದ್ರವಾಗಿ ಹಿಡಿದುಕೊಂಡು ಸರಸು ಕಾಡಿನ ಹಾದಿಯಲ್ಲಿ ನಡೆಯತೊಡಗಿದಳು. ಯಾರಿಗೂ ತಿಳಿಯದಂತೆ ದೂರದ ಪಟ್ಟಣಕ್ಕೆ ಹೋಗಿ ಸುಖವಾಗಿ ಬದುಕಬೇಕೆಂದು ಯೋಚಿಸಿದಳು.

 

ಸ್ವಲ್ಪ ದೂರ ನಡೆಯುವಷ್ಟರಲ್ಲಿ ಅವಳಿಗೆ ಯುವಕರ ಗುಂಪೊಂದು ಎದುರಾಯಿತು. ಸಂಜೆಯ ಹೊತ್ತಲ್ಲಿ, ಈ ಹೆಂಗಸು ಒಂಟಿಯಾಗಿ ಎಲ್ಲಿಗೆ ಹೋಗುತ್ತಿರಬಹುದು ಎಂದು ಆ ಯುವಕರು ಮಾತಾಡಿಕೊಂಡರು. ಸರಸು ತನ್ನ ಕೈಯಲ್ಲಿದ್ದ ಗಂಟನ್ನು ಆದಷ್ಟೂ ಮರೆಮಾಚುತ್ತಾ ಲಗುಬಗನೆ ನಡೆಯುತ್ತಿದ್ದಳು. ಇದರಿಂದ ಯುವಕರ ಅನುಮಾನ ಇನ್ನಷ್ಟು ಹೆಚ್ಚಾಯಿತು.

ನೀನು ಯಾರು? ಓಡುತ್ತಾ ಹೋಗುವೆಯೇಕೆ?'' ಎಂದು ನಾನಾ ಪ್ರಶ್ನೆಗಳನ್ನು ಕೇಳತೊಡಗಿದರು.

ಅದೆಲ್ಲ ನಿಮಗೇಕೆ? ನಿಮ್ಮ ಕೆಲಸ ನೀವು ನೋಡಿಕೊಳ್ಳಿ' ಎಂದು ಸರಸು ಸಿಟ್ಟಿನಿಂದ ನುಡಿದಳು. ''ಕತ್ತಲಾಗುತ್ತಿದೆ, ದಾರಿ ಬಿಡಿ'' ಎಂದು ಯುವಕರನ್ನು ಸರಿಸಿ ಮುಂದೆ ಹೋಗಲೆತ್ನಿಸಿದಳು. ಆಗ ಅವಳ ಕೈಯಲ್ಲಿದ್ದ ಗಂಟು ಕೆಳಗೆ ಬಿದ್ದಿತು. ಅದರಿಂದ ಬಗೆ ಬಗೆಯ ಒಡವೆಗಳು, ನಾಣ್ಯ ನೋಟುಗಳು ಹೊರಗೆ ಚೆಲ್ಲಿದವು.

ಇವಳು ಯಾರೋ ಕಳ್ಳಿಯೆ  ಇರಬೇಕು, ನಡೆಯಿರಿ, ಇವಳನ್ನು ಪೊಲೀಸರಿಗೆ ಒಪ್ಪಿಸೋಣ'' ಎಂದು ಯುವಕರು ಆಕೆಯನ್ನು ಬಲವಂತದಿಂದ ಪಟ್ಟಣದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಪೊಲೀಸರು ಗದರಿದಾಗ ಭಯಗೊಂಡ ಸರಸುವು ನಿಜಸಂಗತಿಯನ್ನು ವಿವರಿಸಿದಳು.

ಕಳ್ಳತನ ಮಾಡಿದ್ದಕ್ಕಾಗಿ ಸರಸುವಿಗೆ ಜೈಲು ಶಿಕ್ಷೆಯಾಯಿತು. ಉಂಡ ಮನೆಗೆ ಎರಡು ಬಗೆದ ಆಕೆಗೆತಕ್ಕ ಶಿಕ್ಷೆಯನ್ನು ಅನುಭವಿಸ ಬೇಕಾಗಿ ಬಂದಿತು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad

Search for Article