Type Here to Get Search Results !

ಮಕ್ಕಳ ನೀತಿ ಕತೆಗಳು - Kannada moral stories

       
Okstory in kannada


kannada moral stories 

Table of Content(toc)  

1. ಮೂರ್ಖ ಕತ್ತೆ

ಒಂದು ಊರಿನಲ್ಲಿ ರಂಗಣ್ಣ ಎಂಬ ಹೆಸರಿನ ಶಿಲ್ಪಿ ವಾಸವಾಗಿದ್ದನು. ಅವನು ತುಂಬಾ ಚೆಂದನೆಯ, ಕುಸುರಿ ಕೆಲಸ ಮಾಡಿ ಶಿಲ್ಪಗಳನ್ನು ಕೆತ್ತಿ ಮಾರಾಟ ಮಾಡುತ್ತಿದ್ದನು. ತನ್ನ ವಿಗ್ರಹಗಳನ್ನು ಹೊರೆಯಲು ಒಂದು ಕತ್ತೆಯನ್ನು ಸಾಕಿಕೊಂಡಿದ್ದನು.

ಒಂದು ದಿನ ದೇವರ ವಿಗ್ರಹವನ್ನು ಕೆತ್ತಿ ಅದನ್ನು ಮಾರಾಟ ಮಾಡಲು ತನ್ನ ಕತ್ತೆಯ ಮೇಲೆ ಹೇರಿಕೊಂಡು ಹೊರಟನು, ಜನರು ದೇವರ ವಿಗ್ರಹವನ್ನು ಕಂಡು ಕೈ ಮುಗಿದು ನಮಸ್ಕರಿಸಿ ಮುಂದಕ್ಕೆ ಹೋಗುತ್ತಿದ್ದರು. ಕತೆಗೆ ಬಹಳ ಜಂಭ ಬಂತು. ಜನರು ತನ್ನನ್ನು ಗೌರವಿಸಿ, ವಂದಿಸಿ ಮುಂದಕ್ಕೆ ಹೋಗುತ್ತಿದ್ದಾರೆ ಎಂಬ ಭಾವನೆ ಕತೆಯ ಮನಸ್ಸಿನಲ್ಲಿ ಸುಳಿಯಿತು. ಅದು ಮುಂದಕ್ಕೆ ಹೋಗದೆ ನಿಂತಲ್ಲಿ ನಿಂತು ಬಿಟ್ಟಿತು. ಆಗ ಯಜಮಾನನು ವಿಗ್ರಹವನ್ನು ತಾನೇ ಹೊತ್ತುಕೊಂಡು ಹೊರಟನು, ಜನರು ಕತ್ತೆಯನ್ನು ಬಿಟ್ಟು ಯಜಮಾನನಿಗೆ ನಮಸ್ಕರಿಸಿದನು. ಮೂರ್ಖ ಕತ್ತೆ ! ಮೊದಲು ಅರ್ಥ ಮಾಡಿಕೊಳ್ಳಲಾಗದೆ ಸುಮ್ಮನೆ ನಿಂತೇ ಇತ್ತು. ನಂತರ ಕತ್ತೆಗೆ ಅರಿವಾಯಿತು. ಜನ ತನ್ನನ್ನು ಗೌರವಿಸುತ್ತಿಲ್ಲ. ತಾನು ಹೊತ್ತು ಕೊಂಡ ದೇವರ ವಿಗ್ರಹಕ್ಕೆ ನಮಿಸುತ್ತಿದ್ದಾರೆ ಎಂದು ಅರಿತುಕೊಂಡಿತು. ಆಗ ಜಂಭವನ್ನು ಬಿಟ್ಟು ತನ್ನ ಪಾಡಿಗೆ ತಾನು ಯಜಮಾನನ ಜೊತೆ ನಡೆಯಲು ಪ್ರಾರಂಭಿಸಿತು.

ಹೀಗೆ ಯಾರೇ ಆಗಲಿ ವಾಸ್ತವವನ್ನು ಅರ್ಥ ಮಾಡಿಕೊಳ್ಳದೇ ಜಂಭ ಪಟ್ಟರೆ ಕತೆಯ ಗತಿ ಬರುವುದು.

ನೀತಿ : ''ಜಂಭ ಒಳ್ಳೆಯದಲ್ಲ."
__________________________________________________________________________________


  2.  ಹುಲಿಯ ಜಂಭ


ಒಂದು ಕಾಡಿನಲ್ಲಿ ಹಲವಾರು ಪ್ರಾಣಿಗಳು ವಾಸವಾಗಿದ್ದವು. ಕಾಡಿನಲ್ಲಿ ಅನೇಕ ರೀತಿಯ ಪ್ರಾಣಿಗಳು, ಪಕ್ಷಿಗಳು, ಜಿಂಕೆ, ಹುಲಿ ಮುಂತಾದ ಪ್ರಾಣಿಗಳು ವಾಸವಾಗಿದ್ದವು. ಅವುಗಳಲ್ಲಿ ಹುಲಿಗೆ ತುಂಬಾ ಜಂಭ, ಎಲ್ಲಾ ಪ್ರಾಣಿಗಳಿಗೂ ತಾನೇ ನಾಯಕ ಎಂದು ಅಹಂಕಾರದಿಂದ ಬೀಗತ್ತಿತ್ತು. ಹುಲಿಯ ಜಂಭದ ಬಗ್ಗೆ ಎಲ್ಲರಿಗೂ ತಿಳಿದಿತ್ತು. ಕಾಡಿನಲ್ಲಿ ಒಂದು ಕೊಬ್ಬಿದ ಜಿಂಕೆ ಸಹ ವಾಸ ಇತ್ತು.

ಹುಲಿಗೆ, ಕೊಬ್ಬಿದ ಜಿಂಕೆಯನ್ನು ಹೇಗಾದರೂ ಮಾಡಿ ತಿನ್ನಬೇಕು ಎಂಬ ಬಯಕೆ ಒಳಗೆ ಇತ್ತು. ಜಿಂಕೆಗೆ ಹುಲಿ ತನ್ನನ್ನು ಬೇಟೆಯಾಡಲು ಬಯಸುತ್ತದೆ ಎಂದೂ ಸಹ ತಿಳಿದಿತ್ತು. ಹೀಗೆ ಇರಲು ಯಾರೂ ಇಲ್ಲದ ಸಮಯದಲ್ಲಿ ಜಿಂಕೆಯನ್ನು ಹಿಡಿದ ಹುಲಿ ಜಿಂಕೆ ! ಇಂದು ನೀನೇ ನನಗೆ ಆಹಾರ" ಎಂದು ಹೇಳಿತು. ಆಗ ಜಿಂಕೆ ಉಪಾಯದಿಂದ ಹುಲಿಯ ಕಡೆಗೆ ತಿರುಗಿ ''ಹುಲಿ ! ನಮ್ಮ ಕಾಡಿನಲ್ಲಿ ನನಗಿಂತ ಕೊಬ್ಬಿದ ಜಿಂಕೆ ಇದೆ. ನೀನು ಅದನ್ನು ಹಿಡಿದು ತಿನ್ನು' ಎಂದು ಹೇಳಿತು. ದಡ್ಡ ಹುಲಿ ಜಿಂಕೆಯ ಮಾತಿಗೆ ಒಪ್ಪಿಕೊಂಡಿತು. ಆದರೆ ಜಿಂಕೆಯನ್ನು ಮರಕ್ಕೆ ಕಟ್ಟಿ ಹಾಕಿ ಅದು ಕೊಬ್ಬಿದ ಜಿಂಕೆಯನ್ನು ಹುಡುಕಿ ಹೊರಟಿತು. ಜಿಂಕೆ ಬಹಳ ಉಪಾಯದಿಂದ ತನ್ನನ್ನು ತಾನು ಕಟ್ಟಿನಿಂದ ಬಿಡಿಸಿಕೊಂಡು ಹೊರಬಂದಿತು. ಅದೇ ಮರಕ್ಕೆ ತನ್ನದೇ ಪ್ರತಿರೂಪದಂತೆ ಇರುವ ಜಿಂಕೆಯನ್ನು ಕಟ್ಟಿ ಹಾಕಿತು. ಜಿಂಕೆ ಮರದ ಹಿಂದೆ ಅಡಗಿ ಕುಳಿತಿತು. ಹುಲಿ ಜಿಂಕೆಯನ್ನು ಹುಡುಕಿ ಆಯಾಸದಿಂದ ಸುಸ್ತಾಗಿ ತಾನು ಕಟ್ಟಿ ಹಾಕಿರುವ ಜಿಂಕೆಯನ್ನು ಕೊಂದು ತಿನ್ನಲು ಆಕ್ರೋಶದಿಂದ ಬಂದಿತು. ಅದು ಹಿಂದೆ ಮುಂದೆ ನೋಡದ ಮರಕ್ಕೆ ಕಟ್ಟಿ ಹಾಕಿರುವ ಜಿಂಕೆಯ ಮೇಲೆ ರೋಷದಿಂದ    ಎರಗಿತು, ಮರಕ್ಕೆ ಕಟ್ಟಿರುವ ಜಿಂಕೆ ಮರದ ಜಿಂಕೆಯಾದ್ದರಿಂದ ಹುಲಿಯ ಹಲ್ಲು ಮುರಿಯಿತು. ಹುಲಿಯು ಜಿಂಕೆಯನ್ನು ತನ್ನ ಕ್ರೂರವಾದ ಉಗುರಿನಿಂದ ಪರಚಿತು. ಆಗ ಹುಲಿಯ ಉಗುರು ಹರಿದು ಬಂದಿತು.. ಹುಲಿ ತನ್ನ ಚೂಪಾದ ಉಗುರುಗಳು, ಹಲ್ಲುಗಳನ್ನು ಕಳೆದುಕೊಂಡಿತು.

ಮರದ ಹಿಂದೆ ಅಡಗಿರುವ ಜಿಂಕೆ ಹೊರ ಬಂದು ಹುಲಿಯನ್ನು ಕಂಡು ''ಹುಲಿರಾಯ | ನಿನ್ನ ಕಥೆ ಮುಗಿಯಿತು. ಮುಂದೆ ನೀನು ಬೇಟೆಯಾಡಲು ಸಾಧ್ಯವಾಗದು. ನೀನು ಉಪವಾಸದಿ೦ದ ಸಾಯಬೇಕಾಗುವುದು' ಎಂದು ಗೇಲಿ ಮಾಡಿತು. ಜಿಂಕೆಯ ಮಾತುಗಳನ್ನು ಕೇಳಿ ಹುಲಿಗೆ ಅಸಾಧ್ಯವಾದ ಕೋಪ ಬಂದಿತು. ಅದು ರೋಷದಿಂದ ಜಿಂಕೆಯ ಮೇಲೆ ಹಾರಿತು. ಆದರೆ ಜಿಂಕಿಗೆ ಹುಲಿಯ ಉಗುರು ಪರಚಲಿಲ್ಲ. ತನ್ನ ಹಲ್ಲುಗಳಿಂದ ಜಿಂಕೆಯನ್ನು ಕಚ್ಚಲು ಹುಲಿ ಮುಂದಾಯಿತು, ಆದರೆ ಹುಲಿಗೆ ಉಗುರು, ಹಲ್ಲು ಇರದೆ ಇದ್ದುದ್ದರಿಂದ ಜಿಂಕೆಗೆ ಹಾನಿಯಾಗಲಿಲ್ಲ.

ಜಿಂಕೆ ಹುಲಿಯ ಕೈಯಿಂದ ತಪ್ಪಿಸಿಕೊಂಡು ಓಡಿತು. ರೋಷದಿಂದ ಹುಲಿ ಆರ್ಭಟಿಸಿದರೂ ಪ್ರಯೋಜನವಾಗಲಿಲ್ಲ. ಹೀಗೆ ಜಿಂಕೆ ಉಪಾಯದಿಂದ ಹುಲಿಯ ಕೈಯಿಂದ ತಪ್ಪಿಸಿಕೊಂಡಿತು. ಜಿಂಕೆ ತನ್ನ ಬುದ್ಧಿವಂತಿಕೆಯನ್ನು, ಹುಲಿಯ ಅಶಕ್ತತೆಯನ್ನು ಎಲ್ಲರ ಬಳಿ 'ಹೇಳಿಕೊಂಡಿತು. ಆಗ ಹುಲಿಗೆ ತನ್ನ ತಪ್ಪಿನ ಅರಿವಾಯಿತು. ಆದರೇನು? ಪ್ರಯೋಜನವಿಲ್ಲದ ಕೆಲಸ ಮಾಡಿದರೆಷ್ಟು ಬಿಟ್ಟರೆಷ್ಟು ಎಂಬತಾಯಿತು ಹುಲಿಯ ಸ್ಥಿತಿ.

ನೀತಿ : "ಕೆಲಸ ಮಾಡುವ ಮೊದಲು ಯೋಚಿಸಬೇಕು.''
    
__________________________________________________________________________________

  3.   ನಾಯಿಪಾಡು


ಒಂದು ಮನೆಯಲ್ಲಿ ಎರಡು ನಾಯಿಗಳು ವಾಸವಾಗಿದ್ದವು. ಒಂದು ನಾಯಿಯ ಹೆಸರು ಪಾಲಿ, ಇನ್ನೊಂದು ನಾಯಿಯ ಹೆಸರು ಸೋನು, ಎರಡು ನಾಯಿಗಳು ಒಂದಕ್ಕೊಂದು ಹೊಂದಿಕೊಂಡು ಆತ್ಮೀಯವಾಗಿ ವಾಸವಾಗಿದ್ದವು. ಮನೆಯ ಯಜಮಾನ ಎರಡು ನಾಯಿಗಳನ್ನು ಸಮನಾಗಿ ನೋಡಿಕೊಂಡಿದ್ದನು. ಎರಡು ನಾಯಿಗಳಿಗೂ ಸಮನಾಗಿ ಊಟ, ತಿಂಡಿಗಳನ್ನು ಹಂಚುತ್ತಿದನು.

ಎರಡು ನಾಯಿಗಳು ಯಜಮಾನ ಹಾಕಿದ ತಿಂಡಿಯನ್ನು ತಿಂದು ಮನೆಯನ್ನು ಕಾಯುತ್ತಿದ್ದವು. ಆದರೆ ರಾತ್ರಿ ಯಜಮಾನ ಮಲಗಿದ ಕೂಡಲೇ ಸೋನು ಪಕ್ಕದ ಮನೆಯನ್ನು ಕಾಯುತ್ತಿತ್ತು. ಪಾಲಿ ಮಾತ್ರ ತನ್ನ ಯಜಮಾನ ಮನೆಯನ್ನು ಕಾಯುತ್ತಿತ್ತು. ಒಂದು ದಿನ ಮಧ್ಯ ರಾತ್ರಿ ಮನೆಯ ಯಜಮಾನನಿಗೆ ಎಚ್ಚರವಾಗಿ ಹೊರಗೆ ಬಂದು ನೋಡಿದನು. ಪಾಲಿ ಮಾತ್ರ ಮನೆಯನ್ನು ಕಾಯುತ್ತಿತ್ತು. ಸೋನು ಮಾತ್ರ ಕಣ್ಣಿಗೆ ಕಾಣಲಿಲ್ಲ. ಮರುದಿನ ಯಜಮಾನ ನಾಯಿಗಳನ್ನು ಪರೀಕ್ಷಿಸಲು ಹೊರಗೆ ಬಂದು ನೋಡಿದನು. ಪಾಲಿ ಮನೆಯನ್ನು ಕಾಯುತ್ತಾ ಕುಳಿತಿತ್ತು, ಸೋನು ಕಣ್ಣಿಗೆ ಬೀಳಲಿಲ್ಲ. ಯಜಮಾನನು ಸೋನುವನ್ನು ಹುಡುಕಿದನು. ಅದು ಪಕ್ಕದ ಮನೆಯನ್ನು8 ಕಾಯುತ್ತಾ ಕುಳಿತಿತ್ತು. ಯಜಮಾನನಿಗೆ ತುಂಬಾ ಕೋಪ ಬಂದಿತು. ಮರುದಿನ ಯಜಮಾನನು ಸೋನುವನ್ನು ಮನೆಯಿಂದ ಹೊರಗೆ ಹೋದನು. ನಾಯಿ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟರೂ ಪ್ರಯೋಜನವಾಗಲಿಲ್ಲ. ಅದು ತನ್ನ ಆಹಾರಕ್ಕಾಗಿ ಬೀದಿ, ಬೀದಿ ಅಲೆಯುತ್ತಿತ್ತು.

ನೀತಿ : "ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ".


__________________________________________________________________________________

4.  ತಮ್ಮನ ಜಾಣೆ

ಒಂದು ಊರಿನಲ್ಲಿ ಅಣ್ಣ ತಮ್ಮಂದಿರು ವಾಸವಾಗಿದ್ದರು. ಅಣ್ಣನು ನೋಡಲು ಗಟ್ಟಿಮುಟ್ಟಾಗಿದ್ದ, ಬುದ್ಧಿಯಲ್ಲಿ ಮಾತ್ರ ದಡ್ಡ. ಆದರೆ ತಮ್ಮ ನೋಡಲು ತುಂಬಾ ಪೀಚು, ಬುದ್ದಿಯಲ್ಲಿ ಮಾತ್ರ ಗಟ್ಟಿಗನಾಗಿದ್ದನು. ಹೀಗಿರಲು ಒಂದು ದಿನ ಅಣ್ಣನು ಕೆರೆಯ ಕಡೆಗೆ ಹೊರಟನು. ಆ ಊರಿನಲ್ಲಿ ಒಂದು ಸುಂದರವಾದ ಕೆರೆ ಇತ್ತು. ಕೆರೆಯ ಮಧ್ಯ ಭಾಗದಲ್ಲಿ ಒಂದು ಸೇಬಿನ ಗಿಡ ಇತ್ತು. ಆ ಮರದಲ್ಲಿ ನೂರಾರು ಸೇಬು ಹಣ್ಣುಗಳು ಬಿಟ್ಟಿದ್ದವು. ಅಣ್ಣನಿಗೆ ತುಂಬಾ ಚೆನ್ನಾಗಿ ಈಜು ಬರುತ್ತಿತ್ತು. ತಮ್ಮನಿಗೆ ಈಜು ಬಾರದು. ಅಣ್ಣನು ಕೆರೆಯಲ್ಲಿ ಈಜಿಕೊಂಡು ಹೋಗಿ ಸೇಬಿನ ಮರದ ಮೇಲೆ ಕುಳಿತು ಸೇಬು ಹಣ್ಣನ್ನು ಕಿತ್ತುಕೊಂಡು ತಿನ್ನುತ್ತಿದ್ದ. ಪಾಪ ತಮ್ಮ! ಈಜು ಬಾರದೆ ದಡದಲ್ಲಿ ಕುಳಿತು ಚಿಂತಿಸುತ್ತಿದ್ದನು. ಅಣ್ಣತಿನ್ನುತ್ತಿರುವ ಹಣ್ಣನ್ನು ತಾನು ತಿನ್ನಲು ಆಗದೆ ಪರಿತಪಿಸುತ್ತಿದ್ದನು. ಅಣ್ಣ! ನಿನ್ನ ಬಳಿ ಇರುವ ಹಣ್ಣನ್ನು ನನಗೂ ಒಂದು ಕೊಡು, ನಾನು ಹಣ್ಣನ್ನು ತಿನ್ನುವೆನು' ಎಂದು ದೈನ್ಯದಿಂದ ಬೇಡಿಕೊಂಡನು. ಆದರೆ ಅಣ್ಣ ಹಠಮಾರಿ. ತಮ್ಮನಿಗೆ ಒಂದು ಹಣ್ಣನ್ನು ತಿನ್ನಲು ಕೊಡಲಿಲ್ಲ. ದಡದಲ್ಲಿ ಕುಳಿತಿದ್ದ ತಮ್ಮನ್ನು ಅಣ್ಣನಿಂದ ಹಣ್ಣನ್ನು ಕಸಿದುಕೊಳ್ಳಲು ಒಂದು ಉಪಾಯವನ್ನು ಮಾಡಿದನು. ತನ್ನ ಕೈಗೆ ಸಿಕ್ಕ ಕಲ್ಲನ್ನು ತೆಗೆದುಕೊಂಡು ಅಣ್ಣನ ಕಡೆಗೆ ಬೀಸಿದನು. ಕೋಪಗೊಂಡ ದಡ್ಡ ಅಣ್ಣ ತನ್ನ ಕೈಯಲ್ಲಿದ್ದ ಸೇಬು ಹಣ್ಣನ್ನು ತಮ್ಮನ ಕಡೆಗೆ ಬೀಸಿದನು. ದಡದಲ್ಲಿ ಕುಳಿತಿದ್ದ ತಮ್ಮ ಹರ್ಷದಿಂದ ಸೇಬು ಹಣ್ಣನ್ನು ತೆಗೆದುಕೊಂಡು ತಿನ್ನತೊಡಗಿದನು. ದಡ್ಡ ಅಣ್ಣ ಕೈಯಲ್ಲಿದ್ದ ಹಣ್ಣನ್ನು ಕಳೆದುಕೊಂಡನು.

ನೀತಿ : ಶಕ್ತಿಗಿಂತ ಯುಕ್ತಿ ಒಳ್ಳೆಯದು.
__________________________________________———————————————————
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Below Post Ad

Search for Article